ತನಗೆ ಸಿಗದವಳು ಯಾರಿಗೂ ಸಿಗಬಾರದೆಂದು 18 ವರ್ಷದ ಯುವತಿಯನ್ನ ಕೊಂದೇಬಿಟ್ಟ

Public TV
2 Min Read

 

ಜೈಪುರ: ತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದೆಂದು ಯುವಕನೊಬ್ಬ 18 ವರ್ಷದ ಯುವತಿಯನ್ನ ಕೊಲೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

18 ವರ್ಷದ ವೈಶಾಲಿ ಶರ್ಮಾ ಕೊಲೆಯಾದ ದುರ್ದೈವಿ. ವೈಶಾಲಿ 12ನೇ ಕ್ಲಾಸ್ ಪರೀಕ್ಷೆ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಲೇಜು ಪ್ರವೇಶಾತಿಗೆ ಸಿದ್ಧತೆ ಮಾಡಿಕೊಳ್ತಿದ್ಲು. ರಾಜಸ್ಥಾನದ ಬನ್‍ಸ್ವಾರಾದ ನಿವಾಸಿಯಾದ ವೈಶಾಲಿ ಜೀವನದಲ್ಲಿ ದೊಡ್ಡ ಕನಸುಗಳನ್ನ ಹೊಂದಿದ್ದಳು. ಕಳೆದ ಬುಧವಾರದವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ತನಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಆಕೆಯನ್ನ ಕೊಂದಿದ್ದಾನೆ.

ನಡೆದಿದ್ದೇನು?: ಬುಧವಾರ ಮಧ್ಯಾಹ್ನ ವೈಶಾಲಿ ಅಗರ್‍ಪುರ ಕಾಲೋನಿಯ ತನ್ನ ಮನೆಯಲ್ಲಿದ್ದಳು. ತನ್ನ ಮನೆಯ ಕೆಳಮಹಡಿಯಲ್ಲಿ ಕೆಲಸದಾಕೆಗೆ ಸಹಾಯ ಮಾಡ್ತಿದ್ಲು. ವೈಶಾಲಿ ತಂದೆ ಪಿಂಕೇಶ್ ಶರ್ಮಾ ಎರಡನೇ ಮಹಡಿಯಲ್ಲಿದ್ರು. ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ತನ್ನ ಮನೆಯ ಕಾಂಪೌಂಡ್ ಹಾರೋದನ್ನ ವೈಶಾಲಿ ನೋಡಿದ್ಲು. ನೆರೆಮನೆಯವನಾದ ಜಗದೀಶ್ ಗೋಡೆ ಹಾರಿ ವೈಶಾಲಿ ಇದ್ದ ಕಡೆಗೆ ಧಾವಿಸಿದ. ವೈಶಾಲಿ ಪ್ರತಿಕ್ರಿಯಿಸುವುದಕ್ಕೂ ಮೊದಲೇ ಆಕೆಯ ಮೇಲೆ ದಾಳಿ ಮಾಡಿದ್ದ. ವೈಶಾಲಿಯ ಕತ್ತಿಗೆ ಹಲವು ಬಾರಿ ಜಗದೀಶ್ ಇರಿದಿದ್ದ. ಮನೆಕೆಲಸದಾಕೆ ಜಗದೀಶ್‍ನನ್ನು ತಡೆಯಲು ಯತ್ನಿಸಿದರಾದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ವೈಶಾಲಿಗೆ ತೀವ್ರ ರಕ್ತಸ್ರಾವವಾಗಿ ಆಕೆ ನೆಲದ ಮೇಲೆ ಬೀಳುವವರೆಗೂ ಜಗದೀಶ್ ಆಕೆಗೆ ಇರಿದಿದ್ದ.

ವೈಶಾಲಿಯ ವಿಕಲಾಂಗ ತಂದೆ ಹಾಗೂ ಅಕ್ಕಪಕ್ಕದ ಮನೆಯವರು ಬರುವ ವೇಳೆಗೆ ಜಗದೀಶ್ ಸ್ಥಳದಿಂದ ಪರಾರಿಯಾಗಿದ್ದ. ವೈಶಾಲಿಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಅದಾಗಲೇ ತಡವಾಗಿದ್ದು, ವೈಶಾಲಿ ಸಾವನ್ನಪ್ಪಿದ್ದಳು.

ಕಳೆದ ಕೆಲವು ದಿನಗಳಿಂದ ಜಗದೀಶ್ ಹಾಗೂ ಆತನ ಸಹೋದರ ತನ್ನನ್ನು ರೇಗಿಸುತ್ತಿದ್ದ ಬಗ್ಗೆ ವೈಶಾಲಿ ಹೇಳಿದ್ದಳು. ಆದ್ರೆ ನಾವು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ ಅಂತ ವೈಶಾಲಿ ಸಂಬಂಧಿಕರು ಹೇಳಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜಗದೀಶ್‍ಗಾಗಿ ಬಲೆ ಬೀಸಿ ಅದೇ ಸಂಜೆ ಆತನನ್ನ ಬಂಧಿಸಿದ್ದಾರೆ. ಮೊದಲಿಗೆ ಈ ಬಗ್ಗೆ ಬಾಯಿ ಬಿಡಲು ನಿರಾಕರಿಸಿದ ಜಗದೀಶ್ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಾನು ವೈಶಾಲಿಯನ್ನ ಹುಚ್ಚನಂತೆ ಪ್ರೀತಿಸುತ್ತಿದ್ದೆ ಅಂತ ಹೇಳಿದ್ದಾನೆ. ಜಗದೀಶ್ ತನ್ನನ್ನು ಪ್ರೀತಿಸುತ್ತಿರುವುದು ವೈಶಾಲಿಗೂ ತಿಳಿದಿತ್ತು. ಆದ್ರೆ ಆಕೆ ಅದನ್ನ ಗಂಭಿರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

ಆಕೆ ನನ್ನವಳಾಗಲಿಲ್ಲ ಅಂದ್ಮೇಲೆ ಬೇರೆ ಯಾರಿಗೂ ಆಕೆ ಸಿಗಲು ನಾನು ಅವಕಾಶ ಕೊಡಲ್ಲ ಅಂತ ಜಗದೀಶ್ ತಪ್ಪೊಪ್ಪಿಕೊಳ್ಳುವ ವೇಳೆ ಪೊಲೀಸರಿಗೆ ಹೇಳಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *