ಲಾಕ್‍ಡೌನ್ ಹೇರದಿದ್ರೆ 2 ಲಕ್ಷ ಜನರಿಗೆ ಸೋಂಕು ತಗುಲುತ್ತಿತ್ತು – ಕೇಂದ್ರ ಸರ್ಕಾರ

Public TV
2 Min Read

– 24 ಗಂಟೆಗಳಲ್ಲಿ 1,035 ಜನರಿಗೆ ಕೊರೊನಾ, 40 ಸಾವು

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,035 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 239 ಜನ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7,447ಕ್ಕೆ ಏರಿದೆ. ಜೊತೆಗೆ 642 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಭಾರತದ ಪೂರ್ವಭಾವಿ ತಯಾರಿ ನಡೆಸಿತ್ತು. ನಾವು ಶ್ರೇಣೀಕೃತ ವಿಧಾನವನ್ನು ಅನುಸರಿಸಿದ್ದೇವೆ. ಪರಿಣಾಮ ದೇಶದಲ್ಲಿ ಕೋವಿಡ್-19 ಮೀಸಲಾದ 586 ಆಸ್ಪತ್ರೆಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆರೋಗ್ಯಕರ ಭಾರತಕ್ಕಾಗಿ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯ: ಮೋದಿ

ಕೊರೊನಾ ವಿರುದ್ಧ ಹೋರಾಡಲು ಲಾಕ್‍ಡೌನ್ ಮತ್ತು ಪೂರಕ ಕ್ರಮಗಳು ಬಹು ಮುಖ್ಯ ಪಾತ್ರವಹಿಸಿದವು. ನಾವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಈ ಸಮಯದಲ್ಲಿ 2 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇತ್ತು ಎಂದು ಅಗರ್ವಾಲ್ ತಿಳಿಸಿದರು. ಇದನ್ನೂ ಓದಿ: ಲಾಕ್‍ಡೌನ್ ಪಾಲಿಸದಿದ್ರೆ ಸೀಲ್‍ಡೌನ್: ಸಿಎಂ ಎಚ್ಚರಿಕೆ

ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಮಾತನಾಡಿ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಆಸ್ಪತ್ರೆಗಳಲ್ಲಿ ಅಥವಾ ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಸಚಿವಾಲಯ ಇಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ಜೊತೆಗೆ ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿರುವಂತೆ ಸೂಚಿಸಿದೆ ಎಂದು ಹೇಳಿದರು.

https://twitter.com/ANI/status/1248926314922487810

ಐಸಿಎಂಆರ್ ಹಿರಿಯ ಅಧಿಕಾರಿ ಆರ್ ಗಂಗಖೇಡ್ಕರ್ ಮಾತನಾಡಿ, ಈಗ ನೀಡಿರುವ ಅವಧಿ ಸಾಕಾಗದಿದ್ದರೆ, ಒಂದು ವೇಳೆ ಒತ್ತಡ ಹೇರಿದರೆ ಔಷಧಿಯನ್ನು ಕಂಡು ಹಿಡಿಯುವುದು ತಪ್ಪಾಗಬಹುದು. ಮಲೇರಿಯಾಗೆ ನೀಡಲಾಗುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯು ರೋಗನಿರೋಧಕತೆಯಂತೆ ಕೆಲಸ ಮಾಡುತ್ತದೆ. ಕೋವಿಡ್-19 ರೋಗಿಗೆ ಔಷಧಿ ಬಳಸುವ ಮುನ್ನ ಪ್ರಯೋಗ ಮಾಡಬೇಕಾಗುತ್ತದೆ. ಅಲ್ಲಿಯವರೆಗೂ ನಾವು ಯಾವುದೇ ಔಷಧಿಯನ್ನು ಸಾರ್ವಜನಿಕರಿಗೆ ಶಿಫಾರಸು ಮಾಡುವುದಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *