ಕೇಂದ್ರದಲ್ಲಿ ಬೇರೆ ಪಕ್ಷ ಇರ್ತಿದ್ರೆ ಬಿಜೆಪಿ ಇಡೀ ದೆಹಲಿ ಬಂದ್ ಮಾಡ್ತಿತ್ತು: ಸಂಜಯ್ ರಾವತ್

Public TV
2 Min Read

ನವದೆಹಲಿ: ಒಂದು ವೇಳೆ ಕೇಂದ್ರದಲ್ಲಿ ಬೇರೆ ಪಕ್ಷ ಅಧಿಕಾರದಲ್ಲಿ ಇರುತ್ತಿದ್ದರೆ ಮೋಕ್ ಬಾಂಬ್ ಪ್ರಕರಣ ಸಂಬಂಧ ಬಿಜೆಪಿಯವರು (BJP) ಇಡೀ ದೆಹಲಿಯನ್ನು ಬಂದ್ ಮಾಡಿಸುತ್ತಿದ್ದರು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನ ಭದ್ರತಾ ಉಲ್ಲಂಘನೆಯ (Security breach in Lok Sabha) ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿರುತ್ತಿದ್ದರೆ, ಈ ವಿಷಯದ ಬಗ್ಗೆ ಬಿಜೆಪಿ ಇಡೀ ದೆಹಲಿಯನ್ನು ಬಂದ್ ಮಾಡುತ್ತಿತ್ತು. ಆದರೆ ಘಟನೆ ಸಂಬಂಧ ಬಿಜೆಪಿ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಆರೋಪಿಗಳನ್ನು ಸಂಸತ್ತಿಗೆ ಪ್ರವೇಶಿಸಲು ಯಾರು ಕೊಟ್ಟರು?. ರಾಷ್ಟ್ರೀಯ ಭದ್ರತೆಯ ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಬಾರದು. ಪ್ರಧಾನಿಯವರು ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಮಾತನಾಡಬೇಕು ಎಂದು ಸಂಜಯ್ ರಾವತ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳು ಹಲಾಲ್ ಮಾಂಸ ಸೇವನೆ ಬಿಡಿ, ಝಟ್ಕಾಗೆ ಆದ್ಯತೆ ನೀಡಿ: ಕೇಂದ್ರ ಸಚಿವ

ನಡೆದಿದ್ದೇನು..?: ಡಿಸೆಂಬರ್ 13ರ ಬೆಳಗ್ಗೆ 11:30 ರಿಂದ ಮಧ್ಯಾಹ್ನ 12:15 ರವರೆಗೆ ಕಲಾಪ ವೀಕ್ಷಣೆಗೆ ಸಮಯ ನೀಡಲಾಗಿತ್ತು. 45 ನಿಮಿಷಗಳವರೆಗೆ ಪಾಸ್ ಪಡೆದ ಮನೋಂಜನ್ ಮತ್ತು ಸಾಗರ್ ಶರ್ಮಾ ಸುಮಾರು 2 ಗಂಟೆಗಳ ಕಾಲ ಕಲಾಪ ವೀಕ್ಷಣೆ ಮಾಡಿದ್ದರು. ಸಂಸತ್‍ನಲ್ಲಿ ಕಲಾಪ ನಡೆಯಲಿ, ನಡೆಯದೇ ಇರಲಿ 45 ನಿಮಿಷಗಳ ಅವಧಿ ಮುಗಿದ ಕೂಡಲೇ ವೀಕ್ಷಕರ ಗ್ಯಾಲರಿಯಿಂದ ತೆರಳಬೇಕಾಗುತ್ತದೆ. ಈ ನಿರ್ದೇಶನವಿದ್ದರೂ ಇಬ್ಬರನ್ನು 2 ಗಂಟೆಗಳ ಕಾಲ ಕಲಾಪ ವೀಕ್ಷಣೆಗೆ ಅನುಮತಿ ನೀಡಿದ್ದೇ ಅತಿದೊಡ್ಡ ಭದ್ರತಾಲೋಪ. ವೀಕ್ಷಕರ ಜಾಗ ಖಾಲಿ ಇದ್ದ ಕಾರಣ ಭದ್ರತಾ ಸಿಬ್ಬಂದಿ ಈ ವಿಷಯವನ್ನು ಗಮನಿಸದ ಕಾರಣ ಈ ಲೋಪ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರ ಗ್ಯಾಲರಿಯಲ್ಲಿ ಇದ್ದ ಇವರು ಮಧ್ಯಾಹ್ನ 1:01ರ ವೇಳೆಗೆ ಗ್ಯಾಲರಿಯಿಂದ ಕೆಳಗಡೆ ಜಿಗಿದು ಹಳದಿ ಬಣ್ಣದ ಸ್ಮೋಕ್ ಬಾಂಬ್ ಸಿಡಿಸಿದ್ದಾರೆ. ಕೆಳಗಡೆ ಜಿಗಿದ ಬಳಿಕ ಮೂರು ಸಾಲುಗಳನ್ನು ದಾಟಿ ಸೀಟಿನ ಕಡೆಗೆ ತಲುಪಿ ಶೂ ಒಳಗಿದ್ದ ವಸ್ತುವನ್ನು ಹೊರತೆಗೆದಿದ್ದಾನೆ. ನಂತರ ಸದನದಲ್ಲಿ ಹಳದಿ ಬಣ್ಣದ ಹೊಗೆ ಏಳಲಾರಂಭಿಸಿದೆ. ಈ ವೇಳೆ ಮೊದಲು ಗಾಬರಿಗೊಂಡರೂ ನಂತರ ಸಂಸದರೆಲ್ಲಾ ಸೇರಿ ಆರೋಪಿಗಳನ್ನು ಹಿಡಿದು ಥಳಿಸಿದ್ದಾರೆ.

Share This Article