ಮುಂದಿನ ವಿಶ್ವಯುದ್ಧ ನಡೆದರೆ ಅದು ನೀರಿಗಾಗಿ: ಡಾ. ಜಗದೀಶ್ ಬಾಳ

Public TV
2 Min Read

ಮಂಗಳೂರು: ಮುಂದಿನ ದಿನಗಳಲ್ಲಿ ವಿಶ್ವಯುದ್ಧ ನಡೆದರೆ ಅದು ನೀರಿಗಾಗಿಯೇ ನಡೆದೀತು. ಯಾಕೆಂದರೆ ಬ್ಲೂ ಪ್ಲಾನೆಟ್ ಎಂದು ಕರೆಯಲ್ಪಡುವ ಭೂಮಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇಲ್ಲ ಎಂಬ ಮಹತ್ವದ ವಿಚಾರವನ್ನು ಬಲ್ಮಠ ಸರ್ಕಾರಿ ಮಹಿಳಾ ಕಾಲೇಜ್‍ನ ಪ್ರಾಂಶುಪಾಲರಾದ ಜಗದೀಶ್ ಬಾಳ ತಿಳಿಸಿದ್ದಾರೆ.

ಮುಲ್ಕಿ ಸಮೀಪದ ಕೊಳ್ನಾಡ್ ನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕೃಷಿ ಮೇಳದ ಕೊನೆಯ ದಿನವಾದ ಆದಿತ್ಯವಾರ ಬೆಳಗ್ಗೆ ಶ್ರೀರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ ‘ಅದಾನಿ’ ಪ್ರಾಯೋಜಿತ “ಜಲಸಂರಕ್ಷಣೆ” ವಿಚಾರಗೋಷ್ಠಿ ನಡೆಯಿತು. ಬಲ್ಮಠ ಸರ್ಕಾರಿ ಮಹಿಳಾ ಕಾಲೇಜ್‍ನ ಪ್ರಾಂಶುಪಾಲರಾದ ಜಗದೀಶ್ ಬಾಳ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಇದನ್ನೂ ಓದಿ: ಇಸ್ರೇಲ್ ಮಾದರಿ ಕೃಷಿಯಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ: ಶೋಭಾ ಕರಂದ್ಲಾಜೆ

ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಿಶ್ವಯುದ್ಧ ನಡೆದರೆ ಅದು ನೀರಿಗಾಗಿಯೇ ನಡೆದೀತು. ಯಾಕೆಂದರೆ ಬ್ಲೂ ಪ್ಲಾನೆಟ್ ಎಂದು ಕರೆಯಲ್ಪಡುವ ಭೂಮಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇಲ್ಲ. ಉಪ್ಪುನೀರಿನ ಪ್ರಮಾಣ ಹೆಚ್ಚಿದ್ದು ಅದನ್ನು ಬಳಸಲು ಸಾಧ್ಯವಿಲ್ಲ. 2.5% ಮಾತ್ರ ಸಿಹಿನೀರು ಇದ್ದು ಇದನ್ನು ಮನುಷ್ಯ ಮಾತ್ರವಲ್ಲ ಎಲ್ಲಾ ಪ್ರಾಣಿ ಪಕ್ಷಿಗಳು ಬಳಸಬೇಕು. ಹೀಗಾಗಿ ನೀರನ್ನು ಮಿತಿ ಮೀರಿ ಬಳಸಬಾರದು. ನೀರಿಗಾಗಿ ಈಗಾಗಲೇ ಗಲಾಟೆ ನಡೆಯುತ್ತಿದ್ದು ಗೋಧಿ, ಭತ್ತ ಬೆಳೆಯುವ ಭೂಮಿಯಲ್ಲಿ ನೀರಿನ ಅಭಾವ ಕಾಡುತ್ತಿದೆ. ಭೂಮಿ ಕೇವಲ ನೀರನ್ನು ಹಿಡಿದಿಡುವ ಪಾತ್ರೆ ಮಾತ್ರ. ಭೂಮಿಯ ಅಡಿಯಲ್ಲಿ ನೀರು ಉತ್ಪತ್ತಿಯಾಗುವುದಿಲ್ಲ. ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಲ್ಲ. ಯಾಕೆಂದರೆ ಭೂಮಿಯ ಅಡಿಯಲ್ಲಿ ಸಾವಿರಾರು ವರ್ಷಗಳ ಕಾಲ ಹಿಡಿದಿಟ್ಟ ನೀರು ಬೇಡವಾದ ಖನಿಜಗಳಿಂದ ಯುಕ್ತವಾಗಿದ್ದು ಅರೋಗ್ಯಕ್ಕೆ ಹಾನಿಕರವಾಗಿದೆ ಎಂದರು.

ಬೆಂಗಳೂರಲ್ಲಿ ಕೆರೆ ಒತ್ತುವರಿ ಮಾಡಿ ಮೆಜೆಸ್ಟಿಕ್ ಬಸ್ ನಿಲ್ದಾಣ, ಸ್ಟೇಡಿಯಂ, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಲಾಗಿದ್ದು ಅದರ ಪರಿಣಾಮ ಈಗಾಗಲೇ ನೋಡುತ್ತಿದ್ದೇವೆ. ಮೂಲ್ಕಿ, ಸುರತ್ಕಲ್, ಮಂಗಳೂರಿನಲ್ಲಿ ಹಿಂದೆ ಸಾಕಷ್ಟು ಸಂಖ್ಯೆಯ ಕೆರೆಗಳಿತ್ತು ಆದರೆ ಈಗ ಕೆರೆಗಳು ಮಾಯವಾಗಿವೆ. ಅಸುಪಾಸಿನ ಕೈಗಾರಿಕೆಗಳು ನೀರಿಲ್ಲದೆ ಬೇಸಿಗೆಯಲ್ಲಿ ಬಂದ್ ಆಗುತ್ತಿವೆ. ಎಂಸಿಎಫ್, ಎಂಆರ್‌ಪಿಎಲ್‌ ನಲ್ಲೂ ಇದೇ ಪರಿಸ್ಥಿತಿ. ಆದರೆ ಇದು ದೊಡ್ಡ ಸುದ್ದಿಯಾಗುವುದಿಲ್ಲ. ನೀರಿನ ಮೂಲ ಮರಗಳು. ಮಳೆ ಬರುವಾಗ ನಾವು ಮರದಡಿ ನಿಲ್ಲುತ್ತೇವೆ ಆದರೆ ಮಳೆ ನಿಂತ ಬಳಿಕ ಅದರಡಿ ನಿಂತರೆ ಹನಿಗಳಿಂದ ಒದ್ದೆಯಾಗುತ್ತೇವೆ. ಹಿಂದೆ ನಾಗಬನದ ಮರದ ಗೆಲ್ಲು ಕಡಿಯಲು ಭಟ್ಟರಲ್ಲಿ ಕೇಳುತ್ತಿದ್ದರೆ, ಇಂದು ನಾಗಬನದ ಪರಿಸ್ಥಿತಿಯೇ ಬದಲಾಗಿದೆ. ಬೇಕಾಬಿಟ್ಟಿ ಮರ ಕಡಿಯಲಾಗುತ್ತದೆ. ನದಿಗಳು ಬರಿದಾಗುತ್ತಿವೆ. ಮಂಗಳೂರಿನಲ್ಲಿ ತ್ಯಾಜ್ಯ ನೀರು ಮರುಬಳಕೆ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ಅದು ಕೇವಲ ಬಾಯಿಮಾತಿಗೆ ಮಾತ್ರ ಸೀಮಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್

ಮಂಗಳೂರಿನಲ್ಲಿ ದೇಶದಲ್ಲೇ ಅತ್ಯಧಿಕ 37.6 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಈಗಾಗಲೇ ದಾಖಲಾಗಿದೆ. ಇದು ತೀರಾ ಕಳವಳಕಾರಿ ಸಂಗತಿ. ಆದರೆ ಈ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬುದ್ಧಿವಂತರ ಜಿಲ್ಲೆಯ ಜನರ ಬುದ್ಧಿಗೆ ಏನಾಗಿದೆ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಮಿತಿಮೀರಿ ನಡೆಯುತ್ತಿದ್ದು ಹೂಳು ಎತ್ತುವ ನಿಟ್ಟಿನಲ್ಲಿ ಮರಳುಗಾರಿಕೆ ಸಂಪ್ರದಾಯಬದ್ಧವಾಗಿ ನಡೆದರೆ ಒಳ್ಳೆಯದು. ಆದರೆ ಮಿತಿಮೀರಿ ನಡೆಯುವುದು ಅಪಾಯಕಾರಿ. ನೀರಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ನೀರಿನ ಹನಿಗಳನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಕಾರ್ ಸದಾಶಿವ ಶೆಟ್ಟಿ ವಹಿಸಿದ್ದರು. ದಯಾಸಾಗರ್ ಪೂಂಜಾ, ಪುಷ್ಪ, ಪಿಡಿಒ ರಮೇಶ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *