ಮೇ 3ರ ಬಳಿಕವೂ ಲಾಕ್‍ಡೌನ್ ಮುಂದುವರಿಸಿದರೆ ಒಳ್ಳೆಯದು: ಸಚಿವ ರಮೇಶ್ ಜಾರಕಿಹೊಳಿ

Public TV
2 Min Read

ಚಿತ್ರದುರ್ಗ: ಕೊರೊನಾ ಸೋಂಕು ಹರಡದಂತೆ ಭಾರತ ಲಾಕ್‍ಡೌನ್ ಆಗಿ ಒಂದು ತಿಂಗಳು ಕಳೆದಿದೆ. ಇನ್ನೇನು ಲಾಕ್‍ಡೌನ್ ತೆರವು ದಿನಾಂಕ ಸಮೀಪಿಸಿದ್ದು, ಕೆಲ ವಲಯಗಳಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನು ಸಡಿಲ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ನಮ್ಮ ಆರೋಗ್ಯಕ್ಕಾಗಿ ಜನರು ಮನೆಯಲ್ಲಿ ಇರುವುದು ಸೂಕ್ತ. ಅಲ್ಲದೇ ಭಾರತದಲ್ಲಿ ಲಾಕ್‍ಡೌನ್ ಮೇ 3ಕ್ಕೆ ಅಂತ್ಯಗೊಳಿಸದೆ ಮುಂದುವರಿಸಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಂಸದರು ನೀಡುತ್ತಿರುವ ಉಚಿತ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿಗಳು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶವನ್ನು ಲಾಕ್‍ಡೌನ್ ಮಾಡಿದ್ದಾರೆ. ಇದನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಪಾಲಿಸಬೇಕಿದೆ. ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಸಹ ಕಾಳಜಿ ವಹಿಸಬೇಕು. ವೈರಸ್ ನಿಯಂತ್ರಣಕ್ಕೆ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.

ದೇಶವನ್ನು ರೋಗದಿಂದ ನಿಯಂತ್ರಣ ಮಾಡುವ ಸಲುವಾಗಿ ಮೇ.3ರವರೆಗೆ ಮಾತ್ರ ಲಾಕ್‍ಡೌನ್ ಮಾಡಲಾಗಿದೆ. ಇದು ಇಲ್ಲಿಗೆ ನಿಲ್ಲದೆ ರೋಗ ನಿಯಂತ್ರಣಕ್ಕೆ ಬರುವವರೆಗೂ ಲಾಕ್‍ಡೌನ್ ಮುಂದುವರಿಸಬೇಕು ಎಂಬುವುದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ. ಲಾಕ್‍ಡೌನ್ ಸಮಯದಲ್ಲಿ ಇಲ್ಲಿನ ಸಂಸದರಾದ ಎ.ನಾರಾಯಣಸ್ವಾಮಿಯವರು ತಮ್ಮ ವೈಯುಕ್ತಿಕವಾಗಿ ಜನತೆ ಹಸಿವಿನಿಂದ ಇರಬಾರದೆಂದು ಉಚಿತವಾಗಿ ಪ್ರತಿ ದಿನ ಆಹಾರವನ್ನು ನೀಡುತ್ತಿದ್ದಾರೆ. ಇದಕ್ಕೆ ಕೆಲ ಸಂಘ ಸಂಸ್ಥೆಯವರು ಸಹಕಾರ ನೀಡಬೇಕಿದೆ ಎಂದರು.

ಸರ್ಕಾರ ಒಳ್ಳೆಯ ಉದ್ದೇಶದಿಂದ ಕಠಿಣ ಕ್ರಮವನ್ನು ತೆಗೆದುಕೊಂಡಿದೆ. ಸರ್ಕಾರದಿಂದ ಮಾತ್ರವೇ ರೋಗವನ್ನು ನಿಯಂತ್ರಣದಲ್ಲಿಡಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ಸೇರಿದಾಗ ಮಾತ್ರ ಇದು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಮುಂದಿನ ದಿನದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರು ಬದ್ಧರಾಗಿರಬೇಕಿದೆ. ಎಲ್ಲರೂ ಸಾಮಾಜಿಕ ಅಂತರವನ್ನು ಕಾಪಾಡಬೇಕು. ಬೆಳಗಾವಿ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹೀಗಾಗಿ ತಬ್ಲಿಕ್ ಜಮಾತ್‍ನಲ್ಲಿ ಭಾಗಿಯಾಗಿದ್ದವರು ವೈಯುಕ್ತಿಕವಾಗಿ ತಪಾಸಣೆಗೆ ಒಳಗಾಗಬೇಕಿದೆ. ಸಮಾಜದ ಮುಖಂಡರು ಕೂಡ ಈ ಕುರಿತು ಗಮನ ನೀಡಬೇಕು ಎಂದರು.

ಕೊರೊನಾ ತಡೆಯುವ ವಿಚಾರದಲ್ಲಿ ಪೊಲೀಸರಿಗೆ ಎಲ್ಲಾ ರೀತಿಯ ಅಧಿಕಾರವನ್ನು ನೀಡಲಾಗಿದೆ. ಇದಕ್ಕೆ ಜನತೆ ಸಹಕಾರ ನೀಡಬೇಕಿದೆ. ಸರ್ಕಾರ ಮತ್ತು ಪೋಲಿಸರು ಹೇಳುವುದಕ್ಕಿಂತ ಜನತೆ ತಿಳಿದು ಮಾಡುವುದರಿಂದ ಇದರ ನಿಯಂತ್ರಣ ಸಾಧ್ಯವಿದೆ. ವೈರಸ್ ನಿಯಂತ್ರಣ ಮಾಡುವಲ್ಲಿ ಪೊಲೀಸ್ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಲಾಕ್‍ಡೌನ್ ಮುಗಿದ ನಂತರ ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತಗೊಳಿಸಲಾಗುವುದು. ನೀರಾವರಿ ವಿಷಯದಲ್ಲಿ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಸಚಿವರು ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿಸಾಗರದಲ್ಲಿ ಚಳ್ಳಕೆರೆಗೆ ನೀರನ್ನು ಹರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರಿಗೆ ಸಂಸದ ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಮುಖಂಡರಾದ ಜಿ.ಎಂ.ಸುರೇಶ್, ನಂದಿನಾಗರಾಜ್ ಸೇರಿದಂತೆ ಇತರರು ಸಾಥ್ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *