ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರಬನ್ನಿ: ಜಯಮೃತ್ಯುಂಜಯ ಸ್ವಾಮೀಜಿ

Public TV
2 Min Read

ಧಾರವಾಡ: ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೇ ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರಬನ್ನಿ ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಕರೆ ನೀಡಿದ್ದಾರೆ.

ಬಿಜೆಪಿ ಹೈಕಮಾಂಡ್‌ ಯತ್ನಾಳ್‌ ಅವರ ಉಚ್ಛಾಟನೆ ಆದೇಶವನ್ನು ವಾಪಸ್ ಪಡೆಯದೇ ಹೋದರೆ ಲಿಂಗಾಯತ (Lingayat Mlas) ಸಮುದಾಯದ ಎಲ್ಲ ಶಾಸಕರು ಬಿಜೆಪಿ ಬಿಟ್ಟು ಹೊರಬರಬೇಕು ಎಂದು ಹೇಳಿದರು.

ಯತ್ನಾಳ್‌ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಛಾಟನೆ ಮಾಡುವಂತೆ ಮಾಡಿವೆ. ಕುಟುಂಬ ರಾಜಕಾರಣ ಬೇಡ ಎನ್ನುವುದು ತಪ್ಪೇ? ಯತ್ನಾಳ್‌ ಏನೇ ಮಾತನಾಡಿದರೂ ಅವರು ಉತ್ತರ ಕರ್ನಾಟಕ, ಹಿಂದುತ್ವದ ಬಗ್ಗೆಯೇ ಮಾತನಾಡಿದ್ದಾರೆ ಎಂದರು. ಇದನ್ನೂ ಓದಿ: ಹೈಕಮಾಂಡ್ ನಿರ್ಣಯ ನಾವೆಲ್ಲ ಪಾಲಿಸಬೇಕು: ಬಸವರಾಜ ಬೊಮ್ಮಾಯಿ

 

ಯತ್ನಾಳ್‌ ಅವರನ್ನು ಉಚ್ಛಾಟನೆ ಮಾಡಿ ಬಿಜೆಪಿ (BJP) ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ಇದರಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಈಗ ಬಿಜೆಪಿಗೆ 60 ಸ್ಥಾನ ಬಂದಿವೆ. ಮುಂದೆ ಮೂವತ್ತು ಸೀಟು ಕೂಡ ಬರುವದಿಲ್ಲ. ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿರದೇ ಇರುವ ಅಂಶಗಳು ಇಲ್ಲಿವೆ ಎಂದು ಹೇಳಿದರು.

ಬೆಳಗಾವಿಯಲ್ಲಿ ನಾಳೆ ಸಭೆ ಕರೆಯುತ್ತೇನೆ. ಮುಂದೆ ಒಂದು ದಿನ ರಾಜ್ಯದ್ಯಂತ ಪ್ರತಿಭಟನೆ ಮಾಡುತ್ತೇವೆ. ಇದು ಪ್ರಧಾನಿ ವಿರುದ್ಧದ ಹೋರಾಟ ಅಲ್ಲ. ಯಾರು ಅಟ್ಟಹಾಸ ಮೆರೆದಿದ್ದಾರೋ ಅವರ ವಿರುದ್ಧ ಹೋರಾಟ. ಬಿಜೆಪಿ ಹೈಕಮಾಂಡ್ ಕೂಡಲೇ ತನ್ನ ಆದೇಶ ವಾಪಸ್ ಪಡೆದು ಆದ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರು

ನಾಳೆ ಗಾಂಧಿ ಭವನದಲ್ಲಿ ಎಲ್ಲ ಪದಾಧಿಕಾರಿಗಳ ಯುವ ಘಟಕ, ರೈತ ಘಟಕದ ಸಭೆ ಕರೆಯುತ್ತೇನೆ. ಯತ್ನಾಳ್‌ ಉಚ್ಛಾಟನೆ ಹಿಂದೆ ದುಷ್ಟ ಶಕ್ತಿಗಳ ಕೈವಾಡ ಇದೆ. ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲರಂತೆ ಯತ್ನಾಳರಿಗೂ ಮಾಡುತ್ತಿದ್ದಾರೆ. ಹೈಕಮಾಂಡ್ ನಮಗೆ ಕುಟುಂಬ ರಾಜಕಾರಣ ಬೇಕು ಎಂದು ನೇರವಾಗಿ ಹೇಳಲಿ. ನಾಳೆ ಎಲ್ಲವನ್ನೂ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಗುಡುಗಿದರು.

Share This Article