ಮುಸ್ಲಿಮರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ: ಉಡುಪಿಯಲ್ಲಿ ಬಹೃತ್ ಏಕತಾ ಸಮಾವೇಶ

Public TV
2 Min Read

ಉಡುಪಿ: ಮುಸ್ಲಿಮರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ. ಈ ದೇಶದಲ್ಲಿ ಮುಸ್ಲೀಮರಿಗೆ ರಾಜಕೀಯ ಅಸ್ತಿತ್ವವೇ ಇಲ್ಲದೆ ಅಸಹಾಯಕರಾಗಿದ್ದೇವೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ ಎಂಬ ಧ್ಯೇಯವಾಕ್ಯದಡಿಯಲ್ಲಿ ನಡೆದ ಏಕತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಸಲ್ಮಾನರು ರಾಜಕೀಯವಾಗಿ ಛಿದ್ರಗೊಂಡು ಬೇಡಿಕೆ ಇಲ್ಲದ ಸಮುದಾಯವಾಗಿದ್ದೇವೆ. ನಮಗೆ ಕೊಡುವ ಬದಲು ನಮ್ಮಲ್ಲಿ ಇರುವುದನ್ನು ಕಸಿದುಕೊಳ್ಳಲಾಗುತ್ತಿದೆ. ಅದನ್ನು ಮರಳಿ ಪಡೆಯುವುದಕ್ಕಾಗಿ ನಾವು ಹೋರಾಟ ಮಾಡುವ ದುಸ್ಥಿತಿ ಎದುರಾಗಿದೆ ಎಂದರು.

ಎಲ್ಲ ರಂಗದಲ್ಲೂ ಮುಸ್ಲಿಮರು ಸಬಲೀಕರಣಗೊಳ್ಳುವುದರಿಂದ ಮಾತ್ರ ಈ ದೇಶ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಮುಸ್ಲಿಮರು ರಾಜಕೀಯವಾಗಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಒಂದಾಗದಿದ್ದರೆ ರಾಜಕೀಯ ಅಸ್ತಿತ್ವ ದೊರೆಯಲು ಸಾಧ್ಯವಿಲ್ಲ ಎಂದರು.

ಈ ದೇಶ ಕೇವಲ ಒಂದು ಸಮುದಾಯದ ದೇಶವಲ್ಲ. ಈ ದೇಶಕ್ಕಾಗಿ ನಮ್ಮ ಅನೇಕ ಹಿರಿಯರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ಈ ದೇಶದ ಸ್ವಾತಂತ್ರ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದವರು ಇಂದು ಈ ದೇಶದ ಆಡಳಿತ ಚುಕ್ಕಾಣಿ ಹಿಡಿದು ಸ್ವಾತಂತ್ರ ಹೋರಾಟದಲ್ಲಿ ಸರ್ವಸ್ವವನ್ನು ತ್ಯಾಗ ಮಾಡಿದ ಮುಸ್ಲಿಮರ ಬಳಿ ದೇಶಪ್ರೇಮದ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಭಾವನೆಗಳನ್ನು ಕೆರಳಿಸುವುದು ಮತ್ತು ಉದ್ರೇಕಕಾರಿ ಭಾಷಣ ಮಾಡುವುದು ಬಿಟ್ಟರೆ, ಈ ದೇಶದ ರಚಾನತ್ಮಕ ನಿರ್ಮಾಣಕ್ಕಾಗಿ ಯಾವುದೇ ಯೋಜನೆಗಳಿಲ್ಲ. ಜಾತಿ, ಧರ್ಮಗಳ ಹೆಸರಿನಲ್ಲಿ ವಿಭಜಿಸಿ ಪರಸ್ಪರ ದ್ವೇಷ, ಹಿಂಸೆಯ ಬುನಾದಿಯ ಮೇಲೆ ಅವರು ಈ ದೇಶ ವನ್ನು ಕಟ್ಟುತ್ತಿದ್ದಾರೆ. ಇವರ ನೀತಿಯಿಂದಾಗಿ ದೇಶದ ಅಲ್ಪಸಂಖ್ಯಾತರು, ದಲಿತರು, ಬಡವರು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಜನ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆ ಸಂಕಷ್ಟದಲ್ಲಿ ದೊಡ್ಡ ಪಾಲು ಮುಸ್ಲಿಮರಿಗೆ ಸಿಕ್ಕಿದೆ ಎಂದು ಅವರು ಹೇಳಿದರು.

ಘರ್ ವಾಪಾಸಿ, ಲವ್ ಜಿಹಾದ್, ಗೋರಕ್ಷಣೆ ಹೆಸರಿನಲ್ಲಿ ನಮ್ಮ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಇಸ್ಲಾಮ್ ಅಂದರೆ ಭಯೋತ್ಪಾದನೆ, ಆಕ್ರಮಣಕಾರಿ, ಮೂಲಭೂತವಾದ, ಮಹಿಳೆಯರ ಹಕ್ಕುಗಳನ್ನು ಕಸಿದು ಕೊಳ್ಳುವ ಧರ್ಮ ಎಂಬುದಾಗಿ ಶತ್ರುಗಳು ಪರಿಚಯಿಸುತ್ತಿದ್ದರೆ, ನಾವು ಅದನ್ನು ಕೇಳಿಕೊಂಡು ಮೌನವಾಗಿದ್ದೇವೆ. ಹಾಗಾಗಿ ಜನರ ಮನಸ್ಸಿನಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ತುಂಬಿಹೋಗಿದೆ. ಇದರ ಪರಿಣಾಮ ಮುಸ್ಲಿಮ್ ಎಂಬ ಕಾರಣಕ್ಕೆ ಕೊಚ್ಚಿ ಕೊಲೆ ಮಾಡಲಾಗುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಮ್ ಯುವಕರನ್ನು ಸುಡಲಾಗುತ್ತಿದೆ ಎಂದು ಯಾಸೀನ್ ಮಲ್ಪೆ ತಿಳಿಸಿದರು.

ಇಂತಹ ಪರಿಸ್ಥಿತಿಯಲ್ಲಿ ನಾವು ಇಸ್ಲಾಮ್ ಮತ್ತು ಮುಸ್ಲಿಮರನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ. ಆ ಮೂಲಕ ಜನರ ಮನಸ್ಸಿನಲ್ಲಿ ತುಂಬಿರುವ ದ್ವೇಷದ ವಿಷವನ್ನು ಹೊರ ತೆಗೆದು ಪ್ರೀತಿ ಅಮೃತವನ್ನು ಉಣಿಸಬೇಕಾಗಿದೆ. ಅಪಾಯದಲ್ಲಿರುವ ದೇಶದ ಸಂವಿಧಾನ ಮತ್ತು ಪ್ರಜಾ ಪ್ರಭುತ್ವದ ರಕ್ಷಣೆಗಾಗಿ ನಾವು ಹೋರಾಟ ಮಾಡಬೇಕು ಎಂದರು.

ಸಮಾವೇಶವನ್ನು ಇತ್ತಿಹಾದೆ ಮಿಲ್ಲತ್ ಕೌನ್ಸಿಲ್‍ನ ಅಧ್ಯಕ್ಷ ಹಾಗೂ ಅಹ್ಲೆ ಸುನ್ನತ್ ವಲ್ ಜಮಾಅತ್‍ನ ಪ್ರಖ್ಯಾತ ವಿದ್ವಾಂಸ ಅಹ್ಮದ್ ರಝಾ ಖಾನ್ ಅವರ ಮೊಮ್ಮಗ ಮೌಲಾನಾ ತೌಖೀರ್ ರಝಾ ಖಾನ್ ಉದ್ಘಾಟಿಸಿದರು.

Share This Article
Leave a Comment

Leave a Reply

Your email address will not be published. Required fields are marked *