ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟರೆ 6 ತಿಂಗಳಲ್ಲಿ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್ ಗಾಂಧಿ

Public TV
2 Min Read

ಅಮೇಥಿ: ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು ಉದ್ಯೋಗ ಸೃಷ್ಟಿ ಮಾಡುವುದು ಬಿಟ್ಟು ಸಭೆಗಳಲ್ಲಿ ಕೇವಲ ಅಭಿವೃದ್ಧಿ ಮಾತುಗಳನ್ನಾಡಿ ತಾಳ್ಮೆ ಪರೀಕ್ಷೆ ಮಾಡಬೇಡಿ. ಸಮಯ ವ್ಯರ್ಥಮಾಡದೇ ನಿರುದ್ಯೋಗ ನಿರ್ಮೂಲನೆ ಮಾಡಿ ಉದ್ಯೋಗ ಕಲ್ಪಿಸಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದ ಅಮೇಥಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇತ್ತೀಚೆಗೆ ರಾಷ್ಟ್ರದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ಪ್ರಧಾನಿ ಮೋದಿ ಕೈಯಲ್ಲಿ ನಿಭಾಯಿಸುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಒಂದು ವೇಳೆ ಕುರ್ಚಿಯಿಂದ ಕೆಳಗಿಳಿದು ನಮಗೆ ಅಧಿಕಾರವನ್ನು ಹಸ್ತಾಂತರ ಮಾಡಿದರೆ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಕೇವಲ ಆರು ತಿಂಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುತ್ತದೆ. ಅಲ್ಲದೇ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸುಮಾರು 16 ನಿಮಿಷಗಳ ಕಾಲ ಭಾಷಣ ಮಾಡಿದ ರಾಹುಲ್, ದೇಶದಲ್ಲಿ ಉದ್ಯೋಗ ಪ್ರಮಾಣ ಕ್ಷೀಣಿಸುತ್ತಿದೆ. ದೇಶದಲ್ಲಿ ಪ್ರತಿ ದಿನ 30 ಸಾವಿರ ಭಾರತೀಯರು ಉದ್ಯೋಗ ಹುಡುಕುತ್ತಿದ್ದಾರೆ. ಅದರಲ್ಲಿ ಕೇವಲ 400 ಜನರಿಗೆ ಮಾತ್ರ ಕೆಲಸ ಸಿಗುತ್ತಿದೆ. ಅದೇ ನೆರೆಯ ಚೀನಾ ಸರ್ಕಾರ ದಿನಕ್ಕೆ 50 ಸಾವಿರ ಜನರಿಗೆ ಉದ್ಯೋಗ ನೀಡುತ್ತಿದೆ. ಉದ್ಯೋಗ ಸೃಷ್ಟಿಯಲ್ಲಿ ಎನ್‍ಡಿಎ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಗೆಲ್ಲಲು ಮೋದಿ ಏನೆಲ್ಲಾ ಭರವಸೆಗಳನ್ನು ನೀಡಿದರು. ಆದರೆ ಇದುವರೆಗೂ ಒಂದು ಯೋಜನೆಯೂ ಸರಿಯಾದ ರೀತಿಯಲ್ಲಿ ಅನುಷ್ಟಾನವಾಗಿಲ್ಲ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್‍ಅಪ್ ನಂತಹ ಅಭಿವೃದ್ಧಿ ಕಾರ್ಯಗಳು ಜಾರಿಯಾದರೂ ಸಹ ನಿರುದ್ಯೋಗ ಮಾತ್ರ ನಿವಾರಣೆಯಾಗುತ್ತಿಲ್ಲ. ದೇಶದ ಶಕ್ತಿಯಾದ ಯುವಜನತೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ನೆಲಕ್ಕಚ್ಚುವಂತೆ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ ಸ್ವಚ್ಛ ಭಾರತ ಅಭಿಯಾನದ ಭ್ರಮೆಯಿಂದ ಹೊರ ಬರಬೇಕು. ಪ್ರತಿಯೊಬ್ಬರೂ ಕೈಯಲ್ಲಿ ಪೊರಕೆ ಹಿಡಿದರೆ ಸ್ವಚ್ಛ ಆದಾಗೆ ಆಗುತ್ತದೆ. ಅಲ್ಲದೇ ಪ್ರಧಾನಿ ಮೋದಿಯ ವಿಚಿತ್ರ ಯೋಜನೆಗಳ ಅನುಷ್ಟಾನ ಹಾಗೂ ಕೆಲಸದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈಗಲಾದರು ಜನಪರ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಸಲಹೆ ನೀಡಿದರು.

 

ದೇಶದ ಜನರ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಪಡೆಯದೇ ಯೋಜನೆಗಳ ಅನುಷ್ಟಾನವಾಗುತ್ತಿದೆ. ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಆಹಾರ ಭದ್ರತೆ ಹಾಗೂ ಭೂಸ್ವಾಧೀನ ಮಸೂದೆಗಳಿಂದ ದೇಶಕ್ಕೆ ಒಳ್ಳೆದಾಗುತ್ತಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *