ಕಾಂಗ್ರೆಸ್‍ಗೆ 40 ಸೀಟ್ ಬಂದ್ರೆ ಮೋದಿ ನೇಣು ಹಾಕಿಕೊಳ್ಳುತ್ತಾನಾ: ಮಲ್ಲಿಕಾರ್ಜುನ ಖರ್ಗೆ ಕಿಡಿ

Public TV
2 Min Read

ಕಲಬುರಗಿ: ಚಿಂಚೋಳಿ ಉಪಚುನಾವಣಾ ಕದನದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ 40 ಸ್ಥಾನವನ್ನು ಗೆಲ್ಲುವುದಿಲ್ಲ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪ್ರಚಾರ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಕಾರ್ಯದಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರವಹಿಸಿದೆ. ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಮೋದಿ ಹುಟ್ಟಿರಲೇ ಇಲ್ಲ. ಅಂತಹ ವ್ಯಕ್ತಿ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಾನೆ. ಮೋದಿ ನನಗಿಂತ 6 ವರ್ಷ ಸಣ್ಣವ. ಪ್ರಚಾರ ಕಾರ್ಯದಲ್ಲಿ ದೇಶದ ಎಲ್ಲೇ ಹೋದರೂ ಕಾಂಗ್ರೆಸ್ 40 ಸೀಟು ಗೆಲ್ಲುವುದಿಲ್ಲ ಎಂದು ಹೇಳುತ್ತಾರೆ. ಆದರೆ 40 ಸೀಟು ಬಂದರೆ ದೆಹಲಿಯ ವಿಜಯ್ ಚೌಕ್ ನಲ್ಲಿ ಮೋದಿ ನೇಣು ಹಾಕಿಕೊಳ್ಳುತ್ತಾನಾ ಎಂದು ಪ್ರಶ್ನೆ ಮಾಡಿದರು.

ದೆಹಲಿಯಲ್ಲಿ ಮೋದಿ ಸಾಲಮನ್ನಾ ಮಾಡಲಿಲ್ಲ, ರಾಜ್ಯದಲ್ಲಿ ಈ ಹಿಂದೆ ಯಡಿಯೂರಪ್ಪ ಸಾಲಮನ್ನಾ ಮಾಡಲಿಲ್ಲ. ಮೊದಲು ಮತ್ತೆ ಮೋದಿ ಎನ್ನುತ್ತಿದ್ದ ಅವರು ಇಂದು ಮತ್ತೊಮ್ಮೆ ಮೋದಿ ಅನ್ನುತ್ತಾರೆ. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು. ನೋಟು ನಿಷೇಧ, ಕಪ್ಪು ಹಣ ವಾಪಸ್ ತರುವ ಬಗ್ಗೆಯೂ ಇದೇ ರೀತಿ ಸುಳ್ಳು ಹೇಳಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಪ್ರತಿ ಭಾಷಣದಲ್ಲೂ ತಾನು ಚಾಯ್ ವಾಲಾ ಎಂದು ಹೇಳುತ್ತಾನೆ. ಆದರೆ ಆತ ವ್ಯಾಪಾರಸ್ಥ ಸಮಾಜಕ್ಕೆ ಸೇರಿದ ವ್ಯಕ್ತಿ. ಅವರ ಮನೆ ಕೂಡ ವ್ಯಾಪಾರಸ್ಥರ ಬೀದಿಯಲ್ಲಿದೆ. ಚಾಯ್ ಮಾಡುವ ಗುತ್ತಿಗೆ ತೆಗೆದುಕೊಂಡು ವ್ಯಾಪಾರ ಮಾಡುವ ಕುಟುಂಬ ಅವರದ್ದು, ಆದರೆ ಜನರಿಗೆ ತಾನು ಬಡವ ಎಂದು ತೋರಿಸಿಕೊಳ್ಳಲಿಕ್ಕೆ ನಾನು ಚಾಯ್ ವಾಲಾ ಎಂದು ಹೇಳುತ್ತಾನೆ ಎಂದು ಕುಟುಕಿದರು. ಅಲ್ಲದೇ ರಾಜೀವ್ ಗಾಂಧಿ ಸತ್ತು ಮೂವತ್ತು ವರ್ಷವಾಯ್ತು. ಅವರ ಬೂದಿ ಕೂಡಾ ವಿಸರ್ಜನೆ ಮಾಡಿಯಾಗಿದೆ. ಆದರೆ ಈಗ ಮೋದಿ ರಾಜೀವ್ ಗಾಂಧಿ ಅವರ ಬೂದಿಯಲ್ಲಿ ಹುಳು ಹುಡುಕುತ್ತಿದ್ದಾನೆ ಎಂದರು.

ಇದೇ ವೇಳೆ ಉಮೇಶ್ ಜಾಧವ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಜಾಧವ್ ಒಂದು ತಿಂಗಳು ಮುಂಬೈ ನಲ್ಲಿ ಠಿಕಾಣಿ ಹೂಡಿದ್ದ. ಆತನಿಗೇನು ಖಾಯಿಲೆ ಇತ್ತು ಅಂತ ತೋರಿಸಿಕೊಳ್ಳಲಿಕ್ಕೆ ಮುಂಬೈಗೆ ಹೋಗಿದ್ದಾನ? ನಾನು ಕಿರುಕುಳ ನೀಡಿದೆ ಎಂದು ಆರೋಪ ಮಾಡಿದ್ದಾನೆ. ಆದರೆ ಜಿಲ್ಲೆಯ ಅಭಿವೃದ್ಧಿಯ ಕಾರ್ಯಗಳು ಜನರಿಗೆ ತಿಳಿದಿದೆ ಅವರು ನಮ್ಮ ಕೈ ಹಿಡಿಯುತ್ತಾರೆ. ಕ್ಷೇತ್ರದಲ್ಲಿ ಪಕ್ಷ ಗೆಲುವು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *