ʻಚಾಣಕ್ಯʼನನ್ನು ಉಲ್ಲೇಖಿಸಿ ಅಮಿತ್‌ ಶಾಗೆ ನಗುನಗುತ್ತಲೇ ತಿವಿದ ಪ್ರಿಯಾಂಕಾ- ಗೊಳ್ಳೆಂದು ನಕ್ಕ ಗೃಹಮಂತ್ರಿ

2 Min Read

ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ (Women Reservation Bill) ತಿದ್ದುಪಡಿ ಮಸೂದೆ ಚರ್ಚೆಯಲ್ಲಿ ವಯನಾಡು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ವಾದ್ರಾ(Priyanka Gandhi Vadra) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಉದ್ದೇಶಿಸಿ ಇಂದು ಚಾಣಕ್ಯ (Chanakya) ಬದುಕಿದ್ದರೆ ನಿಮ್ಮ ರಾಜಕೀಯ ಚತುರತೆಯನ್ನು ನೋಡಿ ಆತನಿಗೆ ಆಘಾತವಾಗುತ್ತಿತ್ತು ಎಂದು ಟಾಂಗ್‌ ಕೊಟ್ಟಿದ್ದಾರೆ.

ಮಹಿಳಾ ಮೀಸಲಾತಿ ಬೆಂಬಲಿಸಿ ಮಾತನಾಡಿದ ಅವರು, ತಮ್ಮ ಪಕ್ಷವು ಮಹಿಳಾ ಪ್ರಾತಿನಿಧ್ಯವನ್ನು ವಿರೋಧಿಸುತ್ತಿಲ್ಲ. ಆದರೆ ಮಸೂದೆಯ ಸಮಯ ಮತ್ತು ರಚನೆಯ ಹಿಂದಿನ ರಾಜಕೀಯ ಉದ್ದೇಶವನ್ನು ಪ್ರಶ್ನಿಸುತ್ತಿದೆ ಎಂದು ಹೇಳಿದರು. ಆಡಳಿತಾರೂಢ ಎನ್‌ಡಿಎ ಸರ್ಕಾರ ಮಹಿಳೆಯರ ಸಬಲೀಕರಣ ಮಡುವುದಕ್ಕಿಂತ ಹೆಚ್ಚಾಗಿ ಹೆಚ್ಚಾಗಿ ಚುನಾವಣಾ ತಂತ್ರವಾಗಿ ಬಳಸುತ್ತಿದೆ ಎಂದು ದೂರಿದರು.

ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮಾಡಿದ ಭಾಷಣವನ್ನು ಉಲ್ಲೇಖಿಸಿ, ಸರ್ಕಾರವು ಮಹಿಳಾ ಹಕ್ಕುಗಳ ಪ್ರತಿಪಾದಕ ಎಂದು ಬಿಂಬಿಸಿಕೊಳ್ಳುತ್ತಾ ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 42ಕ್ಕೆ ಏರಿಕೆ – ದಕ್ಷಿಣ ಭಾರತದ ರಾಜ್ಯಗಳಲ್ಲಿ ಎಷ್ಟು ಸೀಟ್‌ ಹೆಚ್ಚಳ?

 

ಮೋದಿ ಮಾತನ್ನು ಪ್ರಿಯಾಂಕಾ ಗಾಂಧಿ ಉಲ್ಲೇಖಿಸಿಸುತ್ತಿದ್ದಂತೆ ಅಮಿತ್‌ ಶಾ ಸೇರಿದಂತೆ ಆಡಳಿತರೂಢ ಬಿಜೆಪಿ ಸಂಸದರು ನಗೆಯಾಡಲು ಆರಂಭಿಸಿದರು. ಅಮಿತ್‌ ಶಾ ನಗುತ್ತಿರುವುದನ್ನು ನೋಡಿ, ಆಡಳಿತ ಪಕ್ಷವು ಸಂಪೂರ್ಣವಾಗಿ ಸಿದ್ಧವಾಗಿರುವಂತೆ ತೋರುತ್ತಿದೆ. ಒಂದು ವೇಳೆ ಚಾಣಕ್ಯ ಇಂದು ಜೀವಂತವಾಗಿದ್ದರೆ, ಚುನಾವಣೆಗಳನ್ನು ಗೆಲ್ಲಲು ನೀವು ಮಾಡುತ್ತಿರುವ ರಾಜಕೀಯ ಕುತಂತ್ರವನ್ನು ನೋಡಿ ಆತನೇ ಶಾಕ್‌ಗೆ ಒಳಗಾಗುತ್ತಿದ್ದ ಎಂದು ನಗುನಗುತ್ತಲೇ ತಿವಿದರು. ಪ್ರಿಯಾಂಕಾ ಅವರ ಈ ಹೇಳಿಕೆಯಿಂದ ಸದನ ನಗೆಗಡಲಲ್ಲಿ ತೇಲಿತು.  ಇದನ್ನೂ ಓದಿ: ಖಾಲಿ ಚೆಕ್ ಆಫರ್‌ ನೀಡಿ ವಿಪಕ್ಷಗಳನ್ನು ಪೇಚಿಗೆ ಸಿಲುಕಿಸಿದ ಮೋದಿ

ಸಾಮಾನ್ಯವಾಗಿ ಅಮಿತ್ ಶಾ ಮತ್ತು ವಿರೋಧ ಪಕ್ಷಗಳ ನಡುವೆ ಗಂಭೀರವಾದ ಚರ್ಚೆ ಇರುತ್ತದೆ. ಆದರೆ ಪ್ರಿಯಾಂಕಾ ಗಾಂಧಿಯವರು ನಗುನಗುತ್ತಲೇ ʻಚಾಣಕ್ಯʼ ಪದ ಬಳಸಿ ತಿವಿದಾಗ, ಅಮಿತ್ ಶಾ ಅವರು ಕೂಡ ಸಿಟ್ಟಾಗದೇ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ನಕ್ಕಿದ್ದು ವಿಶೇಷವಾಗಿತ್ತು.
Share This Article