ಮಂತ್ರಿ ಸ್ಥಾನ ಬೇಡ, ಅಭಿವೃದ್ಧಿಗೆ ಸಹಕಾರ ನೀಡಿದರೆ ಅಷ್ಟೇ ಸಾಕು: ಸುಮಲತಾ

Public TV
1 Min Read

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಸಿಗಬೇಕು ಅನ್ನೊದು ಸರಿಯಲ್ಲ. ಅವರು ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿದರೇ ಅಷ್ಟೇ ಸಾಕು ಎಂದು ನೂತನ ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಸುಮಲತಾ ಅವರು ತಮ್ಮ ಪುತ್ರನ ಮೊದಲ ಚಿತ್ರ ಅಮರ್ ಪ್ರಮೋಷನ್‍ಗಾಗಿ ಮಂಡ್ಯದ ಸಂಜಯ ಚಿತ್ರಮಂದಿರಕ್ಕೆ ಆಗಮಿಸಿ, ಅಭಿಮಾನಿಗಳ ಜೊತೆ ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜೂನ್ 6 ಅಥವಾ 7 ರಂದು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇರಬಹುದು ಎಂದು ತಿಳಿಸಿದರು.

ಮೋದಿ ಸಂಪುಟದಲ್ಲಿ ನಿಮ್ಮ ಹೆಸರೂ ಇತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ನನಗೆ ಮಂತ್ರಿ ಸ್ಥಾನ ಸಿಗಬೇಕು ಅನ್ನೋದು ಸರಿಯಲ್ಲ. ಅವರು ಅಭಿವೃದ್ಧಿಗೆ ಸಹಕಾರ ನೀಡಿದರೆ ಅಷ್ಟೇ ಸಾಕು. ನಮ್ಮ ಯೋಜನೆಗಳಿಗೆ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಮಂಡ್ಯ ನಗರದ ಕೆ.ಆರ್ ವೃತ್ತದಲ್ಲಿರುವ ಸಂಜಯ ಚಿತ್ರ ಮಂದಿರಕ್ಕೆ ಆಗಮಿಸಿದ ಸುಮಲತಾ ಅಂಬರೀಶ್ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ನಂತರ ಬಾಲ್ಕಾನಿಗೆ ಆಗಮಿಸಿ ಸುಮಲತಾ ಅವರು ಚಿತ್ರ ವೀಕ್ಷಕರಿಗೆ ಕೈ ಬೀಸಿ ಕೃತಜ್ಞತೆ ಸಲ್ಲಿಸಿದರು.

ಪುತ್ರನ ಅಭಿನಯದ ಬಗ್ಗೆ ನಾನು ಹೇಳಬಾರದು, ಅಭಿಮಾನಿಗಳು ಹೇಳಬೇಕು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಂಡ್ಯ ಅಭಿಮಾನಿಗಳಂತೆ ಇತರೆ ಜಿಲ್ಲೆಯ ಅಭಿಮಾನಿಗಳು ಚಿತವನ್ನು ಸ್ವಾಗತಿಸುವ ವಿಶ್ವಾಸವಿದೆ ಎಂದರು. ನನಗೆ ಅಂಬಿ ಅಭಿನಯದ ಒಲವಿನ ಉಡುಗೊರೆ ಹಾಡು ತುಂಬಾ ಇಷ್ಟ. ಹಾಗಾಗಿ ನಾನೇ ಹೇಳಿ ಆ ಹಾಡನ್ನು ಈ ಚಿತ್ರಕ್ಕೆ ಹಾಕಿಸಿದ್ದೇನೆ ಎಂದು ಖುಷಿಯನ್ನು ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *