ಬೆಂಗಳೂರು: ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಕೋಲಾಹಲ ಮಧ್ಯೆ ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ಮಹತ್ವದ ಸುಳಿವು ನೀಡಿದ್ದಾರೆ. ಹೈಕಮಾಂಡ್ ಸಂಪುಟ ಪುನಾರಚನೆಗೆ ಅವಕಾಶ ನೀಡಿದರೆ ಸಿದ್ದರಾಮಯ್ಯನವರ (Siddaramaiah) ಸ್ಥಾನ ಅಬಾಧಿತ. ಇಲ್ಲದೇ ಇದ್ದರೆ ರಾಜಕೀಯ ಚಟುವಟಿಕೆ ನಡೆಯುತ್ತವೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಐದಾರು ತಿಂಗಳ ಹಿಂದೆಯೇ ಪುನಾರಚನೆ ಮಾಡುವಂತೆ ಹೈಕಮಾಂಡ್ ನನಗೆ ಸೂಚಿಸಿದೆ ಎಂದು ಸಿದ್ದರಾಮಯ್ಯ ಈಗಾಗಲೇ ತಿಳಿಸಿದ್ದಾರೆ. ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್‌ಗೆ ದೇವೇಗೌಡರು ಮತ್ತು ದೇವೇಗೌಡರ ಕುಟುಂಬ ಹೇಗೆ ಅನಿವಾರ್ಯವೋ ಹಾಗೆಯೇ ಕಾಂಗ್ರೆಸ್ಸಿಗೆ (Congress) ಸಿದ್ದರಾಮಯ್ಯ ಅನಿವಾರ್ಯ. ಇದನ್ನೂ ಎಲ್ಲರೂ ಒಪ್ಪುತ್ತಾರೆ. ನನ್ನ ಅನುಭವದ ಪ್ರಕಾರ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ನಾಯಕ ಎಂದರು.
ದಲಿತ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿ, ದಲಿತರು ಮುಂದಿನ ಸಿಎಂ ಆಗುವುದರಲ್ಲಿ ತಪ್ಪೇನಿದೆ? ಒಬ್ಬರು ದಲಿತರು ಸಿಎಂ ಆದರೆ ಸಂತೋಷ ಪಡಬೇಕು. ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರಲಿ ಅಂತ ಹೈಕಮಾಂಡ್ ಘೋಷಣೆ ಮಾಡಬಹುದು ಎಂದು ನಾನು ಅಂದುಕೊಂಡಿದ್ದೇನೆ. ಒಂದು ಪಕ್ಷ ಬದಲಾವಣೆ ಅದೂ ಇದು ಎನ್ನುವುದು ನಡೆದರೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅದು ನಡೆಯುತ್ತದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ (DK Shivakumar) ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಅದರಲ್ಲೇನು ವಿಶೇಷ ಇಲ್ಲ. ನಾವು ರಾಹುಲ್ ಗಾಂಧಿ ಸಮಯ ಕೇಳಿದರಲ್ಲಿ ಅಜೆಂಡಾ ಇರುತ್ತದೆ. ಡಿಕೆಶಿ ಸಮಯ ಕೇಳಿರುವುದಲ್ಲಿ ಯಾವುದೇ ಅಜೆಂಡಾ ಇಲ್ಲ. ಪಕ್ಷದ ಬಗ್ಗೆ ಮಾತನಾಡುವುದಕ್ಕೆ ಸಮಯ ಕೇಳಿರುತ್ತಾರೆ. ಕೋರ್ಟ್ ಕೇಸ್ ಅದೂ ಇದೂ ಇರುತ್ತದೆ. ಅದಕ್ಕೆ ಡಿಕೆಶಿ ದೆಹಲಿಗೆ ಹೋಗಿರಬಹುದು ಎಂದರು.
