ಯಾರಾದ್ರೂ ಬಣ್ಣ ಹಚ್ಚಿದ್ರೆ ʻಹೋಳಿ ಮುಬಾರಕ್ʼ ಹೇಳಿ – ಮುಸ್ಲಿಮರಿಗೆ ಅಯೋಧ್ಯೆಯ ಮೌಲ್ವಿ ಸಲಹೆ

Public TV
1 Min Read

ಅಯೋಧ್ಯೆ: ಹೋಳಿ (Holi) ಹಬ್ಬದಂದು ಅಯೋಧ್ಯೆಯಾದ್ಯಂತ (Ayodhya) ಎಲ್ಲಾ ಮಸೀದಿಗಳಲ್ಲಿ (Mosques) ಶುಕ್ರವಾರದ ನಮಾಜ್‌ನ್ನು ಮಧ್ಯಾಹ್ನ 2 ಗಂಟೆಯ ನಂತರ ಸಲ್ಲಿಸಲಾಗುವುದು ಎಂದು ನಗರದ ಮುಖ್ಯ ಧರ್ಮಗುರು ಮೊಹಮ್ಮದ್ ಹನೀಫ್ (Mohammad Haneef) ತಿಳಿಸಿದ್ದಾರೆ.

ಹೋಳಿ ಆಚರಣೆಗಳಿಗೆ ಅನುಗುಣವಾಗಿ ನಮಾಜ್‌ನ ಸಮಯವನ್ನು ಸರಿಹೊಂದಿಸಲಾಗುವುದು. ಎಲ್ಲಾ ಮಸೀದಿಗಳು ಮಧ್ಯಾಹ್ನ 2 ಗಂಟೆಯ ನಂತರ ಪ್ರಾರ್ಥನೆ ಸಲ್ಲಿಸುವಂತೆ ನಾವು ನಿರ್ದೇಶಿಸಿದ್ದೇವೆ. ಹೋಳಿ ಹಬ್ಬದ ಸಮಯದಲ್ಲಿ ಎಲ್ಲಾ ಮುಸ್ಲಿಂ ಸಮುದಾಯದ ಸದಸ್ಯರು ತಾಳ್ಮೆಯಿಂದ ಇರಬೇಕು. ಯಾರಾದರೂ ಅವರಿಗೆ ಬಣ್ಣ ಹಚ್ಚಿದರೆ, ಅವರು ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಬೇಕು. ಪ್ರೀತಿ ಮತ್ತು ಗೌರವದ ಮನೋಭಾವದಿಂದ ‘ಹೋಳಿ ಮುಬಾರಕ್’ ಎಂದು ಹೇಳಬೇಕು ಎಂದು ಸಲಹೆ ನೀಡಿದ್ದಾರೆ.

ಹೋಳಿ ಮತ್ತು ಜುಮಾ ಹೊಂದಿಕೆಯಾಗುವುದು ಇದೇ ಮೊದಲಲ್ಲ. ಇದು ಆಗಾಗ ಸಂಭವಿಸುತ್ತಿರುತ್ತದೆ. ಇದು ನಮಗೆ ಏಕತೆಯನ್ನು ಬೆಳೆಸಲು ಒಂದು ಉತ್ತಮ ಅವಕಾಶವಾಗಿದೆ ಎಂದಿದ್ದಾರೆ.

ಇದೇ ವೇಳೆ ಜನರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಅವರು ತಿಳಿಸಿದರು. ನಮ್ಮ ಹಿಂದೂ ಸಹೋದರರಿಗೆ ಹೋಳಿಗೆ ಶುಭ ಹಾರೈಸುತ್ತೇವೆ. ಅವರ ಸಂತೋಷದಲ್ಲಿ ನಾವು ಭಾಗಿಯಾಗುತ್ತೇವೆ ಎಂದಿದ್ದಾರೆ.

ಹೋಳಿಗೆ ಆಚರಣೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಆ ದಿನ ಯಾವುದೇ ಕೋಮು ಉದ್ವಿಗ್ನತೆ ನಡೆಯದಂತೆ ಶಾಂತಿ ಸಮಿತಿ ಸಭೆಗಳನ್ನು ಸಹ ನಡೆಸಲಾಗುತ್ತಿದೆ ಎಂದು ಅಯೋಧ್ಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಚಂದ್ರ ವಿಜಯ್ ಸಿಂಗ್ ತಿಳಿಸಿದ್ದಾರೆ.

Share This Article