ಶೇ.90ರಷ್ಟು ಮುಸ್ಲಿಮರು ಮತ ಹಾಕಿದ್ರೆ ರಾಹುಲ್ ಗಾಂಧಿಯೇ ಪ್ರಧಾನಿ: ಜಮೀರ್

Public TV
1 Min Read

ಚಿಕ್ಕಬಳ್ಳಾಪುರ: ದೇಶದಲ್ಲಿನ ಶೇ.90ರಷ್ಟು ಮುಸ್ಲಿಮ್ ಬಾಂಧವರು ಮತದಾನ ಮಾಡಿದರೆ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಆಗಲಿದ್ದಾರೆ. ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನೂತನ ಶಾದಿಮಹಲ್ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈಗ ಶೇ.50ರಷ್ಟು ಮುಸ್ಲಿಮ್ ಬಾಂಧವರು ಮಾತ್ರ ಮತದಾನ ಮಾಡುತ್ತಿದ್ದಾರೆ. ಉಳಿದ ಶೇ.50 ರಷ್ಟು ಮಂದಿ ಮತದಾನ ಮಾಡುವುದಿಲ್ಲ. ಹೀಗಾಗಿಯೇ ಕಳೆದ ಬಾರಿ ಮೋದಿ ಈ ದೇಶದ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ ಎಂದು ಹೇಳಿದರು.

ಈ ಬಾರಿ ಶೇ.90ರಷ್ಟು ಮುಸ್ಲಿಂ ಬಾಂಧವರು ಮತದಾನ ಮಾಡಿದರೆ ಈ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಲ್ಲದೇ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಮುಂದಿನ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲು ತಯಾರಾಗಿರುವ ಸಂಸದ ವೀರಪ್ಪ ಮೊಯ್ಲಿಗೆ ಅವರಿಗೆ ಮತ ನೀಡುವಂತೆ ಜಮೀರ್ ಅವರು ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಈ ಜಮೀರ್ ಅಹಮದ್‍ಗೆ ಏನೂ ಗೊತ್ತಿಲ್ಲ ಅಂತ ಕೆಲವರು ಹೇಳುತ್ತಾರೆ. ಹೌದು ನನಗೆ ಏನೂ ಗೊತ್ತಿಲ್ಲ, ನಾನೊಬ್ಬ ಹೆಬ್ಬೆಟ್ಟು ಎಂದರು.

ಪುಲ್ವಾಮಾ ಉಗ್ರರ ದಾಳಿಯನ್ನು ಖಂಡಿಸಿದ ಜಮೀರ್ ಅಹಮದ್, ಮೃತಪಟ್ಟವರಲ್ಲಿ ಮುಸ್ಲಿಂ ಇದ್ದಾರಾ? ಹಿಂದೂಗಳು ಇದ್ದಾರಾ? ಕ್ರಿಶ್ಚಿಯನ್, ಸಿಖ್ ಇದ್ದರಾ? ಅಂತ ನೋಡಿದ್ರ ಇಲ್ಲವಲ್ಲ. ಹುತಾತ್ಮ ಯೋಧರಲ್ಲಿ ಓರ್ವ ಮುಸ್ಲಿಂ ಯೋಧನೂ ಸಹ ಇದ್ದ. ಹೀಗಾಗಿ ನಾವೆಲ್ಲರೂ ಹಿಂದೂಸ್ತಾನದವರು ಎಂದು ಸಂದೇಶ ಸಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *