IDFC First Bank ಒಂದೇ ಬ್ರ್ಯಾಂಚ್‌ನಲ್ಲಿ 590 ಕೋಟಿ ವಂಚನೆ – ನಾಲ್ವರು ಅಮಾನತು

2 Min Read

ನವದೆಹಲಿ: ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ (IDFC First Bank) 590 ಕೋಟಿ ರೂ. ವಂಚನೆ ನಡೆದಿದೆ. ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬ್ಯಾಂಕಿನ ಷೇರು ಮೌಲ್ಯ 13.42 ರೂ.(ಶೇ.16.70) ಇಳಿಕೆಯಾಗಿದೆ.

ಹರ್ಯಾಣ ಸರ್ಕಾರದ (Haryana Government) ಇಲಾಖೆಯ ಖಾತೆಯಲ್ಲಿ ವಂಚನೆ ನಡೆದಿದ್ದು ಈಗ ಬ್ಯಾಂಕ್‌ ತನಿಖೆ ಆರಂಭಿಸಿದೆ. ಸರ್ಕಾರ ಇಲಾಖೆಯ ಪುಸ್ತಕದಲ್ಲಿರುವ ಮೊತ್ತಕ್ಕೂ ಬ್ಯಾಂಕಿನಲ್ಲಿರುವ ಬ್ಯಾಲೆನ್ಸ್‌ ಮೊತ್ತಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ.

ಸರಿಯಾಗಿ ಹೊಂದಾಣಿಕೆಯಾಗದ ಕಾರಣ ಇಲಾಖೆ ಬ್ಯಾಂಕ್‌ನಲ್ಲಿರುವ ಖಾತೆಯನ್ನೇ ಮುಚ್ಚಿ ಬೇರೆ ಕಡೆ ವರ್ಗಾಯಿಸುವಂತೆ ಮನವಿ ಮಾಡಿದಾಗ ವಂಚನೆಯ ವಾಸನೆ ಬಡಿದಿದೆ.

ಫೆಬ್ರವರಿ 18 ರಿಂದ ಇನ್ನೂ ಹಲವಾರು ಹರಿಯಾಣದ ಸರ್ಕಾರಿ ಇಲಾಖೆಗಳು ನಮ್ಮ ಖಾತೆಯಲ್ಲೂ ಇದೇ ರೀತಿ ಸಮಸ್ಯೆಯಾಗಿದೆ ಎಂದು ದೂರು ನೀಡಿವೆ. ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ಪರಿಶೀಲನೆ ನಡೆಸಿದಾಗ ಸುಮಾರು 590 ಕೋಟಿ ರೂ. ಅಕ್ರಮ ನಡೆದಿರುವುದು ಗೊತ್ತಾಗಿದೆ. ಇದನ್ನೂ ಓದಿ: ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರು, 80% ಆದಾಯ ಚಾಲಕರಿಗೆ: ಅಮಿತ್‌ ಶಾ


ಅಕ್ರಮ ನಡೆದ ಬೆನ್ನಲ್ಲೇ ಬ್ಯಾಂಕ್‌ ಸೆಬಿಗೆ (SEBI) ಪತ್ರ ಬರೆದು ಸುಮಾರು 590 ಕೋಟಿ ರೂ. ಅಕ್ರಮ ನಡೆದಿರುವುದು ಆಂತರಿಕ ಮೌಲ್ಯಮಾಪನದಲ್ಲಿ ಪತ್ತೆಯಾಗಿದೆ. ಚಂಡೀಗಢದ ಒಂದು ನಿರ್ದಿಷ್ಟ ಶಾಖೆಯ ಕೆಲವು ಉದ್ಯೋಗಿಗಳಿಂದ ಈ ಅಕ್ರಮ ನಡೆದಿದೆ. ಬೇರೆ ಎಲ್ಲೂ ಅಕ್ರಮ ನಡೆದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಚಿನ್ನದ ಬೆಲೆಯನ್ನು ಆರ್‌ಬಿಐ ಮೇಲ್ವಿಚಾರಣೆ ಮಾಡುತ್ತಿದೆ: ನಿರ್ಮಲಾ ಸೀತಾರಾಮನ್‌

ಬ್ಯಾಂಕ್‌ ಈಗ ಅಕ್ರಮ ಎಸಗಿದ ನಾಲ್ವರು ಉದ್ಯೋಗಿಗಳನ್ನು ಅಮಾನತುಗೊಳಿಸಿದೆ. ವಂಚನೆಗಳ ಮೇಲ್ವಿಚಾರಣೆಗಾಗಿ ವಿಶೇಷ ಸಮಿತಿ ರಚನೆ ಮಾಡಿದ್ದು ಫೆಬ್ರವರಿ 20 ರಂದು ಸಭೆ ಸೇರಿದೆ.

ತನಿಖೆಯ ಸಮಯದಲ್ಲಿ ಹರಿಯಾಣ ಸರ್ಕಾರವು ಬ್ಯಾಂಕಿನೊಂದಿಗಿನ ಎಲ್ಲಾ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Share This Article