ವಿಶ್ವದಾಖಲೆಯ ಶತಕ ಸಿಡಿಸಿದ ಕೊಹ್ಲಿಗೆ ಪಾಕ್‌ ಕ್ರಿಕೆಟಿಗನಿಂದ ʻಚಕ್ರವರ್ತಿʼ ಬಿರುದು – ಅಭಿನಂದನೆಗಳ ಮಹಾಪೂರ

Public TV
3 Min Read

ಮುಂಬೈ: ಸದ್ಯ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಟೂರ್ನಿಯಲ್ಲಿ ವಿಶ್ವದಾಖಲೆಯ ಶತಕ ಸಿಡಿಸಿರುವ ವಿರಾಟ್‌ ಕೊಹ್ಲಿ (Virat Kohli) ಸುದ್ದಿಯಲ್ಲಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್‌ನ 50ನೇ ಶತಕ ಸಿಡಿಸುವ ಮೂಲಕ ಕೊಹ್ಲಿ ಕ್ರಿಕೆಟ್‌ ಆರಾಧ್ಯ ದೈವ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆ ಮುರಿದಿದ್ದಾರೆ.

ಕೊಹ್ಲಿ ಶತಕ ಸಂಭ್ರಮವನ್ನು ವಿಶ್ವದಾದ್ಯಂತ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಹಿರಿಯ ಕ್ರಿಕೆಟಿಗರಿಂದಲೂ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ಪಾಕ್‌ ಮಾಜಿ ಕ್ರಿಕೆಟಿಗ ಮಾಸಿಂ ಅಕ್ರಮ್‌ ಕೊಹ್ಲಿಗೆ ʻಚಕ್ರವರ್ತಿʼ ಎಂಬ ಬಿರುದು ನೀಡಿದ್ದಾರೆ. ಇತರರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ…

ನರೇಂದ್ರ ಮೋದಿ (Narendra Modi): ವಿರಾಟ್‌ ಕೊಹ್ಲಿ ಅವರು ತಮ್ಮ ಏಕದಿನ ಕ್ರಿಕೆಟ್‌ನ 50ನೇ ಶತಕ ಸಿಡಿಸುವ ಮೂಲಕ ಕ್ರೀಡಾ ಮನೋಭಾವ ವ್ಯಾಖ್ಯಾನಿಸುವ ಶ್ರೇಷ್ಠತೆ ಮತ್ತು ಪರಿಶ್ರಮದ ಮನೋಭಾವ ಸಹ ಪ್ರದರ್ಶಿಸಿದ್ದಾರೆ. ಇದು ಮತ್ತೊಂದು ಮೈಲುಗಲ್ಲಾಗಿದ್ದು, ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ.

ಸಚಿನ್‌ ತೆಂಡೂಲ್ಕರ್‌ (Sachin Tendulkar): ಅಂದು ನಾನು ನಿಮ್ಮನ್ನು ಮೊದಲ ಬಾರಿಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ನನ್ನ ಪಾದ ಮುಟ್ಟುವಂತೆ ಇತರ ತಂಡದ ಸದಸ್ಯರು ನಿಮ್ಮನ್ನ ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದ್ರೆ ಅತೀ ಶೀಘ್ರದಲ್ಲೇ, ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನೀವು ನನ್ನ ಹೃದಯ ಮುಟ್ಟಿದ್ದೀರಿ. ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ.

ವಾಸಿಂ ಅಕ್ರಮ್‌ (Wasim Akram): ನಾವಿಂದು ವಿರಾಟ್‌ ಕೊಹ್ಲಿ ಯುಗದಲ್ಲಿ ಬದುಕುತ್ತಿದ್ದೇವೆ. ಧನ್ಯವಾದಗಳು ʻಚಕ್ರವರ್ತಿʼ. ಇದನ್ನೂ ಓದಿ: ಅಂದು ನಕ್ಕಿದ್ದೆ, ನೀವಿಂದು ನನ್ನ ಹೃದಯ ಮುಟ್ಟಿದ್ದೀರಿ – ತನ್ನ ದಾಖಲೆ ಮುರಿದ ಕೊಹ್ಲಿ ಅಭಿನಂದಿಸಿದ ಕ್ರಿಕೆಟ್‌ ದೇವರು

ಮೊಹಮ್ಮದ್‌ ಅಫೀಜ್‌ (Mohammad Hafeez): ವಿಶ್ವದಾಖಲೆಯ ಏಕದಿನ ಶತಕ ಸಿಡಿಸಿದ ವಿರಾಟ್‌ ಕೊಹ್ಲಿಗೆ ಅಭಿನಂದನೆಗಳು. ವಿಶ್ವದಾದ್ಯಂತ ಕ್ರಿಕೆಟ್‌ ಅಭಿಮಾನಿಗಳನ್ನು ನೀವು ರಂಜಿಸುತ್ತಿದ್ದೀರಿ, ನೀವು ಇನ್ನಷ್ಟು ಆರೋಗ್ಯವಾಗಿರಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ವರ್ಷಗಳ ಕಾಲ ಇದ್ದ ಸುಪ್ರೀಂ ದಾಖಲೆಗಳಿಗೆ ಕೊಹ್ಲಿ ಗ್ರಹಣ ಬಿಡಿಸಿದ್ದಾರೆ. ಒಂದೇ ವಿಶ್ವಕಪ್‌ ಆವೃತ್ತಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ವಿರಾಟ್‌ ಕೊಹ್ಲಿ ಕ್ರಿಕೆಟ್‌ ಆರಾಧ್ಯ ದೈವ ಸಚಿನ್‌ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನಕ್ಕೆ ತಲೆದಂಡ – ಪಾಕ್‌ ತಂಡದ ನಾಯಕತ್ವಕ್ಕೆ ಬಾಬರ್‌ ಆಜಂ ಗುಡ್‌ಬೈ

Share This Article