ಗ್ಲೌಸ್ ತೆಗೆಯಲು ಹೇಳಿದ ಐಸಿಸಿ – ಧೋನಿ ಪರ ಬ್ಯಾಟ್ ಮಾಡಿದ ಬಿಸಿಸಿಐ

Public TV
2 Min Read

ನವದೆಹಲಿ: ಸೇನಾ ಲಾಂಛನ ಇರುವ ಗ್ಲೌಸನ್ನು ಧರಿಸಿ ಆಟವಾಡುತ್ತಿರುವ ಧೋನಿ ಪರ ಸುಪ್ರೀಂ ಕೋರ್ಟ್ ನೇಮಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಬ್ಯಾಟಿಂಗ್ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ವಿನೋದ್ ರಾಯ್, ಧೋನಿ ಅವರು ಗ್ಲೌಸ್ ಬಳಸಿ ಆಡಲು ಅನುಮತಿ ನೀಡುವಂತೆ ಐಸಿಸಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಗ್ಲೌಸ್ ನಲ್ಲಿ ಯಾವುದೇ ಧರ್ಮ ಮತ್ತು ಜಾಹೀರಾತು ಇಲ್ಲ. ಹೀಗಾಗಿ ಬಿಸಿಸಿಐ ಐಸಿಸಿ ಜೊತೆ ಮನವಿ ಮಾಡಿ ಧೋನಿಗೆ ಗ್ಲೌಸ್ ಧರಿಸಲು ಅನುಮತಿ ನೀಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‍ನ ಸೌಥಾಂಪ್ಟನ್ ಮೈದಾನದಲ್ಲಿ ಬುಧವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಧೋನಿ ಪ್ಯಾರಾಚೂಟ್ ರೆಜಿಮೆಂಟ್‍ನ ಬಲಿದಾನ್ ಲಾಂಛನ ಇರುವ ಗ್ಲೌಸ್ ಧರಿಸಿದ್ದರು. ಈ ಪಂದ್ಯದಲ್ಲಿ ಧೋನಿ ಆಂಡಿಲೆ ಫೆಹ್ಲುಕ್ವವೋ ಅವರನ್ನು ಸ್ಟಂಪ್ ಔಟ್ ಮಾಡಿದ್ದರು. ಈ ವೇಳೆ ಕ್ಯಾಮೆರಾದಲ್ಲಿ ಧೋನಿ ಗ್ಲೌಸ್ ಸೆರೆಯಾದ ಬಳಿಕ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಧೋನಿ ಕೈಯಲ್ಲಿದ್ದ ಗ್ಲೌಸ್‍ಗೆ ಐಸಿಸಿ ಅಕ್ಷೇಪ ಮಾಡಿತ್ತು. ಐಸಿಸಿ ಉಪಕರಣ ಮತ್ತು ಪೋಷಾಕು ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವಾಗ ಯಾವುದೇ ರಾಜಕೀಯ, ಜಾತಿ ಇಲ್ಲವೇ ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಿತ ಸಂದೇಶಗಳನ್ನು ಪ್ರದರ್ಶನ ಮಾಡುವಂತಿಲ್ಲ. ಆದಕ್ಕಾಗಿ ಈ ಲಾಂಛನ ಇರುವ ಗ್ಲೌಸ್‍ನ್ನು ತೆಗೆದು ಆಡಲು ಧೋನಿಗೆ ಸೂಚಿಸುವಂತೆ ಬಿಸಿಸಿಐಗೆ ತಾಕೀತು ಮಾಡಿತ್ತು.

ಐಸಿಸಿಯ ಈ ಕ್ರಮವನ್ನು ಭಾರತದ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ. ಮೊದಲು ನಿಮ್ಮ ಅಂಪೈರ್‍ ಗಳಿಗೆ ಸರಿಯಾಗಿ ತೀರ್ಪು ನೀಡಲು ಹೇಳಿ. ಇಂತಹ ಸಿಲ್ಲಿ ವಿಚಾರಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಬರೆದು ಐಸಿಸಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಈ ಪ್ಯಾರಾಚೂಟ್ ರೆಜಿಮೆಂಟ್‍ನ ಬಲಿದಾನ್ ಲಾಂಛನ ಇರುವ ವಸ್ತುಗಳನ್ನು ಬಳಸಲು ಕೇವಲ ಪ್ಯಾರಾಮಿಲಿಟರಿ ಕಾಮಾಂಡೋಗಳಿಗೆ ಮಾತ್ರ ಅನುಮತಿ ಇದೆ. 2011 ರಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇರಿದ್ದ ಧೋನಿ, 2015ರಲ್ಲಿ ಪ್ಯಾರಾ ಬ್ರಿಗೇಡ್‍ನಿಂದ ತರಬೇತಿ ಪಡೆದಿದ್ದರು. ಆದ್ದರಿಂದ ಅವರು ಧರಿಸಬಹುದು. ಸೇನೆ ನಮ್ಮ ದೇಶದ ಹೆಮ್ಮೆಯ ವಿಚಾರ. ಹೀಗಾಗಿ ಗ್ಲೌಸ್ ಧರಿಸಿದರೆ ತಪ್ಪೇನು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಮಂತ್ರಿಯಾದ ಫವಾದ್ ಚೌಧರಿ ಅವರು ಟ್ವೀಟ್ ಮಾಡಿ, “ಧೋನಿ ಇಂಗ್ಲೆಂಡ್‍ಗೆ ವಿಶ್ವಕಪ್ ಅಡಲು ಹೋಗಿದ್ದಾರೆ ಹೊರತು ಮಹಾಭಾರತಕ್ಕಲ್ಲ. ಭಾರತೀಯ ಮಾಧ್ಯಮಗಳು ಈ ವಿಚಾರದ ಬಗ್ಗೆ ವಿಲಕ್ಷಣ ಚರ್ಚೆ ಮಾಡುತ್ತಿದ್ದಾರೆ ಯಾಕೆ? ಯುದ್ಧ ದಾಹಿಗಳಾಗಿರುವ ಈ ಮಾಧ್ಯಮದ ಮಂದಿಯನ್ನು ಸಿರಿಯಾ, ಅಫಘಾನಿಸ್ತಾನ ಅಥವಾ ರುವಾಂಡಗಳಿಗೆ ಸೈನಿಕರನ್ನಾಗಿ ಕಳಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *