T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

Public TV
3 Min Read

ಕ್ಯಾನ್ಬೆರಾ: ಜಾನ್ ಪ್ರೈಲಿಂಕ್ (JanFrylinck), ಜೆಜೆ ಸ್ಮಿತ್ ಆಲ್‌ರೌಂಡರ್ ಆಟ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಟಿ20 ವಿಶ್ವಕಪ್ (T20 WorldCup) ಮೊದಲ ಪಂದ್ಯದಲ್ಲೇ ಶ್ರೀಲಂಕಾ (SriLanka) ವಿರುದ್ಧ ನಮೀಬಿಯಾ (Namibia) 55 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅರ್ಹತಾ ಸುತ್ತಿನ ಉದ್ಘಾಟನಾ ಪಂದ್ಯದಲ್ಲೇ ಶುಭಾರಂಭ ಪಡೆದುಕೊಂಡಿದೆ.

ಶ್ರೀಲಂಕಾ ಬೌಲರ್‌ಗಳ ಸಂಘಟಿತ ಪ್ರದರ್ಶನದ ಹೊರತಾಗಿಯೂ ನಮೀಬಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಲಂಕಾ ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ನಿಗದಿತ 19 ಓವರ್‌ಗಳಲ್ಲೇ 108 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲನ್ನು ಒಪ್ಪಿಕೊಂಡಿತು.

ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನಮೀಬಿಯಾಕ್ಕೆ ನೀಡಿತು. ನಂತರ ಕ್ರೀಸ್‌ಗಳಿದ ಲಂಕಾಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ (Kusal Mendis)  ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ನಿಸ್ಸಾಂಕ 10 ಎಸೆತಗಳಲ್ಲಿ 9 ರನ್‌ಗಳಿಸಿದರೆ ಮೆಂಡಿಸ್ 6 ಎಸೆತಕ್ಕೆ 6ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬ್ಯಾಟ್ ಬೀಸಿದ ಧನಂಜಯ ಡಿ ಸಿಲ್ವಾ 11 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 12 ರನ್ ಗಳಿಸಿ ನಿರ್ಗಮಿಸಿದರು.

ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಭಾನುಕಾ ರಾಜಪಕ್ಸೆ (Bhanuka Rajapaksa)ಹಾಗೂ ದಸುನ್ ಶನಕ ಉತ್ತಮ ಸಾಂಘಿಕ ಪ್ರದರ್ಶನದಿಂದ 49 ರನ್ ಕಲೆಹಾಕಿದರು. ಇಬ್ಬರ ಜೊತೆಯಾಟದಲ್ಲಿ 4 ಬೌಂಡರಿ 1 ಸಿಕ್ಸರ್ ಸೇರಿ 44 ಎಸೆತಗಳಲ್ಲಿ 49 ರನ್ ಗಳಿಸಿದರು. ಇದರಿಂದ ತಂಡ ಗೆಲುವಿನ ಕನಸು ಕಾಣುತ್ತಿರುವಾಗಲೇ ರಾಜಪಕ್ಸೆ ಆಟಕ್ಕೆ ನಮೀಬಿಯಾ ಬೌಲರ್ ಬ್ರೇಕ್ ಹಾಕಿದರು. ರಾಜಪಕ್ಸೆ 20 ರನ್ (21 ಎಸೆತ, 2 ಬೌಂಡರಿ), ದಸುಮ್ ಶನಕ 29 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟಾದರು. ನಂತರದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಲಂಕಾ ಉದ್ಘಾಟನಾ ಪಂದ್ಯದಲ್ಲೇ ಸೋಲನ್ನು ಅನುಭವಿಸಬೇಕಾಯಿತು.

ದನುಷ್ಕ ಗುಣತಿಲಕ, ಪ್ರಮೋದ್ ಮದುಶನ್ ಶೂನ್ಯಕ್ಕೆ ನಿರ್ಗಮಿಸಿದರೆ, ವನಿಂದು ಹಸರಂಗ 4 ರನ್, ಚಾಮಿಕಾ ಕರುಣಾರತ್ನೆ 5 ರನ್, ದುಷ್ಮಂತ ಚಮೀರ 8 ರನ್ ಗಳಿಸಿದರು. ಮಹೇಶ್ ತೀಕ್ಷಣ 11 ರನ್‌ಗಳಿಸಿ ಅಜೇಯರಾಗುಳಿದರು. ಶ್ರೀಲಂಕಾ ತಂಡದ ಪರ ಪ್ರಮೋದ್ ಮದುಶನ್ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ, ಚಮೀರಾ, ಕರುಣರತ್ನೆ ಹಾಗೂ ವನಿಂದ ಹಸರಂಗ (Wanindu Hasaranga) ತಲಾ ಒಂದೊಂದು ವಿಕೆಟ್ ಪಡೆದರು. ಒಟ್ಟಿನಲ್ಲಿ ಲಂಕಾ ಬ್ಯಾಟಿಂಗ್ ವೈಫಲ್ಯ ಇಂದಿನ ಸೋಲಿಗೆ ಕಾರಣವಾಯಿತು.

ಇಲ್ಲಿನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್ ವ್ಯಾನ್ ಲಿಂಗೆನ್ 3 ರನ್, ಡಿವನ್ ಲಾ ಕುಕ್ 9 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. 16 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಜಾನ್ ನಿಕೊಲ್ ಈಟನ್ 20 ರನ್, ಸ್ಟಿಫನ್ ಬಾರ್ಡ್ 26, ನಾಯಕ ಗೆರ್ಹಾಡ್ ಬಾರ್ಡ್ 20 ರನ್ ಕಲೆಹಾಕಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.

ಪ್ರೈಲಿಂಕ್ – ಸ್ಮಿತ್ ಆಲ್‌ರೌಂಡರ್ ಆಟ: ನಮೀಬಿಯಾ ತಂಡವು 14.2 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 93 ರನ್ ಗಳಿಸಿ ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ 7ನೇ ವಿಕೆಟ್‌ಗೆ ಜಾನ್ ಪ್ರೈಲಿಂಕ್ (JanFrylinck) ಹಾಗೂ ಜೆಜೆ ಸ್ಮಿತ್ 34 ಎಸೆತಗಳಲ್ಲಿ 69 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಾನ್ ಪ್ರೈಲಿಂಕ್ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್ ಬಾರಿಸಿ ರನೌಟ್ ಆದರು. ಇನ್ನು ಮತ್ತೊಂದು ತುದಿಯಲ್ಲಿ ಜೆಜೆ ಸ್ಮಿತ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಪೇರಿಸಿ ತಂಡಕ್ಕೆ ಆಸರೆಯಾದರು.

ಇನ್ನೂ ಬೌಲಿಂಗ್‌ನಲ್ಲೂ ಅಬ್ಬರಿಸಿದ ಪ್ರೈಲಿಂಕ್ 4 ಓವರ್‌ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರೆ, ಜೆಜೆ ಸ್ಮಿತ್ 3 ಓವರ್‌ಗಳಲ್ಲಿ 16 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ನಮೀಬಿಯಾ ತಂಡದ ಪರ ಡೇವಿಡ್ ವೈಸ್, ಬರ್ನಾರ್ಡ್ ಸ್ಕೋಲ್ಟ್ಜ್‌, ಬೆನ್ ಶಿಕೊಂಗೊ, ಜಾನ್ ಫ್ರಿಲಿಂಕ್, ತಲಾ ಎರಡು ವಿಕೆಟ್ ಪಡೆದರೆ, ಜೆಜೆ ಸ್ಮಿತ್ 1 ವಿಕೆಟ್ ಪಡೆದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *