World Cup 2023: ಲಂಕಾ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಜಯ – ಪಾಕ್‌ ಮುಂದಿದೆ ಅಸಾಧ್ಯ ಸವಾಲು

Public TV
3 Min Read

ಬೆಂಗಳೂರು: ಸಂಘಟಿತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಪ್ರದರ್ಶನದಿಂದ ನ್ಯೂಜಿಲೆಂಡ್‌ (New Zealand) ತಂಡವು ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ, ಸೆಮಿಫೈನಲ್‌ ಹಾದಿಯನ್ನು ಸುಲಭವಾಗಿಸಿಕೊಂಡಿದೆ. ಆದ್ರೆ ಪಾಕಿಸ್ತಾನ (Pakistan) ತಂಡಕ್ಕೆ ಇದು ನುಂಗಲಾರದ ತುತ್ತಾಗಿದೆ.

ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ 275+ ರನ್‌ಗಳ ಅಂತರದಿಂದ ಇಂಗ್ಲೆಂಡ್‌ (England) ತಂಡವನ್ನು ಸೋಲಿಸಬೇಕಿದೆ. ಅಥವಾ 2.3 ಓವರ್‌ಗಳಲ್ಲಿ ಇಂಗ್ಲೆಂಡ್‌ ಟಾರ್ಗೆಟ್‌ ಅನ್ನು ಚೇಸ್‌ ಮಾಡಬೇಕಿದೆ ಎಂದು ಕ್ರಿಕೆಟ್‌ ತಜ್ಞರು ಅಂದಾಜಿಸಿದ್ದಾರೆ. ಆದ್ರೆ ಇಂಗ್ಲೆಂಡ್‌ ತಂಡವನ್ನು ಅಷ್ಟು ಸುಲಭದಲ್ಲಿ ಸೋಲಿಸುವುದು ಪಾಕ್‌ಗೆ ಅಸಾಧ್ಯವಾಗಿದ್ದು, ಬಹುತೇಕ ಸೆಮಿ ಫೈನಲ್‌ ಕನಸು ಭಗ್ನ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ಮುಡಿಗೆ 7 ವಿಶ್ವಕಪ್ ಏರಿಸಿದ್ದ ನಾಯಕಿ ಮೆಗ್ ಲ್ಯಾನಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಕಿವೀಸ್‌, ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಶ್ರೀಲಂಕಾಗೆ (Sri Lanka) ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 171 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗುರಿ ಬೆನ್ನತ್ತಿದ್ದ ಕಿವೀಸ್‌ 23.2 ಓವರ್‌ಗಳಲ್ಲೇ 172 ರನ್‌ ಗಳಿಸಿ ಸೆಮಿಫೈನಲ್‌ ಹಾದಿಯನ್ನು ಸುಲಭವಾಗಿಸಿಕೊಂಡಿತು. ಇನ್ನೂ 2023ರ ಏಕದಿನ ವಿಶ್ವಕಪ್‌ ಆವೃತ್ತಿಯಲ್ಲಿ ಕೊನೆಯ ಲೀಗ್‌ ಪಂದ್ಯವನ್ನಾಡಿದ ಶ್ರೀಲಂಕಾ ಸೋಲಿನೊಂದಿಗೆ ವಿದಾಯ ಹೇಳಿತು. ಇದನ್ನೂ ಓದಿ: ಕ್ರಿಕೆಟ್‌ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್‌ ವಿರುದ್ಧ ಮಾಥ್ಯೂಸ್ ಕೆಂಡ

ಕಿವೀಸ್‌ ಪರ ಕಣಕ್ಕಿಳಿದ ರಚಿನ್‌ ರವೀಂದ್ರ (Rachin Ravindra) ಹಾಗೂ ಡಿವೋನ್‌ ಕಾನ್ವೆ ಜೋಡಿ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದರು. ಮೊದಲ ವಿಕೆಟ್‌ಗೆ 12.2 ಓವರ್‌ಗಳಲ್ಲೇ ಈ ಜೋಡಿ 86 ರನ್‌ ಸಿಡಿಸಿತ್ತು. ಕಾನ್ವೆ 45 ರನ್‌ (42 ಎಸೆತ, 9 ಬೌಂಡರಿ), ರವೀಂದ್ರ 42 ರನ್‌ (34 ಎಸೆತ, 3 ಬೌಂಡರಿ, 3 ಸಿಕ್ಸರ್)‌ ಬಾರಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಡೇರಿಲ್‌ ಮಿಚೆಲ್‌ 43 ರನ್‌ (31 ಎಸೆತ, 5 ಬೌಂಡರಿ, 2 ಸಿಕ್ಸರ್), ಕೇನ್‌ ವಿಲಿಯಮ್ಸನ್‌ (Kane Williamson) 14 ರನ್‌,‌ ಮಾರ್ಕ್‌ ಚಾಪ್ಮನ್‌ 7 ರನ್‌ಗಳ ಕೊಡುಗೆ ನೀಡಿ ಔಟಾದರೆ, ಗ್ಲೇನ್‌ ಫಿಲಿಪ್ಸ್‌ 17 ರನ್‌, ಟಾಮ್‌ ಲ್ಯಾಥಮ್‌ 2 ರನ್‌ ಗಳಿಸಿ ಅಜೇಯರಾಗುಳಿದರು. ಲಂಕಾ ಪರ ಏಂಜಲೋ ಮ್ಯಾಥ್ಯೂಸ್‌ 2 ವಿಕೆಟ್‌ ಕಿತ್ತರೆ, ಮಹೀಶ್‌ ತೀಕ್ಷಣ ಮತ್ತು ದುಶ್ಮಂತ ಸಮೀರ ತಲಾ ಒಂದೊಂದು ವಿಕೆಟ್‌ ಪಡೆದರು.

ಇದಕ್ಕೂ ಬ್ಯಾಟಿಂಗ್‌ ಮಾಡಿದ ಲಂಕಾ ತಂಡ ಮತ್ತೊಮ್ಮೆ ಕಳಪೆ ಪ್ರದರ್ಶನ ತೋರಿತು. ಆರಂಭಿಕನಾಗಿ ಕಣಕ್ಕಿಳಿದ ಕುಸಾಲ್ ಪೆರೇರಾ 51 ರನ್‌ (28 ಎಸೆತ, 9 ಬೌಂಡರಿ, 2 ಸಿಕ್ಸರ್)‌, ಕೊನೆಯಲ್ಲಿ ಮಹೀಶ್ ತೀಕ್ಷಣ 91 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 38 ರನ್‌ ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪಮೊತ್ತಕ್ಕೆ ವಿಕೆಟ್‌ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಟೀಂ ಇಂಡಿಯಾ ವಿರುದ್ಧ ಹೀನಾಯ ಸೋಲನುಭವಿಸಿದ ಬಳಿಕ ಲಂಕಾಗೆ ಇದು ಮತ್ತೆ ಮುಖಭಂಗ ಉಂಟುಮಾಡಿತು. ಇದನ್ನೂ ಓದಿ: ಮ್ಯಾಕ್ಸಿ ಬೆಂಕಿ ಆಟಕ್ಕೆ ಹಲವು ದಾಖಲೆಗಳು ಭಸ್ಮ – ವಿಶ್ವದಾಖಲೆಯ ಪಟ್ಟಿ ಓದಿ 

ಶ್ರೀಲಂಕಾ ಪರ ಪಾಥುಮ್ ನಿಸ್ಸಾಂಕ 2 ರನ್‌, ಕುಸಲ್ ಮೆಂಡಿಸ್ 6ರನ್‌, ಸದೀರ ಸಮರವಿಕ್ರಮ 1 ರನ್‌, ಚರಿತ್ ಅಸಲಂಕ 8 ರನ್‌, ಏಂಜೆಲೊ ಮ್ಯಾಥ್ಯೂಸ್ 16 ರನ್‌, ಧನಂಜಯ ಡಿ ಸಿಲ್ವಾ 19 ರನ್‌, ಚಮಿಕ ಕರುಣಾರತ್ನೆ 6 ರನ್‌, ದುಷ್ಮಂತ ಚಮೀರ 1 ರನ್‌, ದಿಲ್ಶನ್ ಮಧುಶಂಕ 19 ರನ್‌ ಗಳಿಸಿ ಔಟಾದರು.

ಕಿವೀಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಟ್ರೆಂಟ್‌ ಬೌಲ್ಟ್‌ 10 ಓವರ್‌ಗಳಲ್ಲಿ 37 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಬಳಿಸಿದರು. ಇನ್ನುಳಿದಂತೆ ಲಾಕಿ ಫರ್ಗುಸನ್, ಮಿಚೆಲ್‌ ಸ್ಯಾಂಟ್ನರ್‌ ಮತ್ತು ರಚಿನ್‌ ರವೀಂದ್ರ ತಲಾ 2 ವಿಕೆಟ್‌ ಹಾಗೂ ಟಿಮ್‌ ಸೌಥಿ ಒಂದು ವಿಕೆಟ್‌ ಪಡೆದು ಮಿಂಚಿದರು.

Share This Article