World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

Public TV
4 Min Read

ಕೋಲ್ಕತ್ತಾ: ಸಂಘಟಿತ ಬ್ಯಾಟಿಂಗ್‌, ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ (England) ತಂಡ ಪಾಕಿಸ್ತಾನದ ವಿರುದ್ಧ 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 2023ರ ವಿಶ್ವಕಪ್‌ ಆವೃತ್ತಿಗೆ ವಿದಾಯ ಹೇಳಿದರೆ, ಭಾರತದಲ್ಲಿ ವಿಶ್ವಕಪ್‌ (World Cup 2023) ಗೆದ್ದು ಬರುತ್ತೇವೆ ಎಂದು ಬೀಗಿದ್ದ ಪಾಕ್‌ ತಂಡ ಹೀನಾಯ ಸೋಲಿನೊಂದಿಗೆ ವಿದಾಯ ಹೇಳಿದೆ.

ಇಲ್ಲಿನ ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತ್ತು. 338 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕ್‌ (Pakistan) ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 43.3 ಓವರ್‌ಗಳಲ್ಲಿ 244 ರನ್‌ಗಳಿಸಿ ಸರ್ವಪತನ ಕಂಡಿತು.

2021ರ ವಿಶ್ವಕಪ್‌ ಟೂರ್ನಿ ಹಾಗೂ 2023ರ ಏಷ್ಯಾಕಪ್‌ ಟೂರ್ನಿಯಲ್ಲೂ ಪಾಕ್‌ ತಂಡ ನಾಕೌಟ್‌ ಹಂತದಲ್ಲಿ ಸೋತು ನಿರಾಸೆ ಅನುಭವಿಸಿತ್ತು. 2022ರ ಏಷ್ಯಾಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ, 2022ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋತು ತವರಿಗೆ ಮರಳಿತ್ತು. ಆದ್ರೆ 2023ರ ಏಕದಿನ ವಿಶ್ವಕಪ್‌ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿರುವುದು ಪಾಕ್‌ಗೆ ತೀವ್ರ ಮುಖಬಂಗವಾಗಿದೆ.

ಸೆಮಿಸ್‌ ಕನಸು ಕಂಡಿದ್ದ ಪಾಕ್‌ ಆರಂಭದಲ್ಲೇ ಆಘಾತ ಅನುಭವಿಸಿತು. 10 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಬಾಬರ್‌ ಆಜಂ (Babar Azam) ಮತ್ತು ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಜೋಡಿ 68 ಎಸೆತಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿದರೂ ಪ್ರಯೋಜನವಾಗಲಿಲ್ಲ. ಈ ಜೋಡಿ ಔಟಾಗುತ್ತಿದ್ದಂತೆ ತಂಡದ ಪತನ ಆರಂಭವಾಯಿತು. ಕಳಪೆ ಬೌಲಿಂಗ್‌ ಹಾಗೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ನೀರಸ ಪ್ರದರ್ಶನದಿಂದ ಪಾಕ್‌ ಹೀನಾಯ ಸೋಲನುಭವಿಸಿತು.

ಪಾಕ್‌ ಪರ ಅಬ್ದುಲ್ಲಾ ಶಫೀಕ್‌ ಶೂನ್ಯ ಸುತ್ತಿದ್ದರೆ, ಆಘಾ ಸಲ್ಮಾನ್ 51 ರನ್‌ (45 ಎಸೆತ, 6 ಬೌಂಡರಿ, 1 ಸಿಕ್ಸರ್)‌, ಫಖರ್‌ ಝಮಾನ್‌ 1 ರನ್‌, ಬಾಬರ್‌ ಆಜಂ 38 ರನ್‌ (45 ಎಸೆತ, 6 ಬೌಂಡರಿ), ಮೊಹಮ್ಮದ್‌ ರಿಜ್ವಾನ್‌ 36 (51 ರನ್‌, 2 ಬೌಂಡರಿ), ಸೌದ್‌ ಶಕೀಲ್‌ 29 ರನ್‌, ಇಫ್ತಿಕಾರ್‌ ಅಹ್ಮದ್‌ 3 ರನ್‌, ಶಾದಾಬ್‌ ಖಾನ್‌ 3 ರನ್‌, ಶಾಹೀನ್‌ ಶಾ ಅಫ್ರಿದಿ 25 ರನ್‌ ಗಳಿಸಿದರೆ, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಹ್ಯಾರಿಸ್‌ ರೌಫ್‌ 23 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿದ್ರೆ, ಮೊಹಮ್ಮದ್‌ ವಸೀಮ್‌ 16 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ತಂಡ, ಕೊನೆಯ ಪಂದ್ಯದಲ್ಲಿ ಸ್ಪೋಟಕ ಇನ್ನಿಂಗ್ಸ್‌ ಆರಂಭಿಸಿತ್ತು. ಮೊದಲ ವಿಕೆಟ್‌ಗೆ ಡೇವಿಡ್‌ ಮಲಾನ್‌ ಹಾಗೂ ಜಾನಿ ಬೈರ್ಸ್ಟೋವ್‌ ಜೋಡಿ 13.3 ಓವರ್‌ಗಳಲ್ಲಿ 82 ರನ್‌ಗಳ ಜೊತೆಯಾಟ ನೀಡಿತ್ತು. ಅಲ್ಲದೇ 3ನೇ ವಿಕೆಟ್‌ಗೆ ಬೆನ್‌ಸ್ಟೋಕ್ಸ್‌ ಮತ್ತು ಜೋ ರೂಟ್‌ 131 ಎಸೆತಗಳಲ್ಲಿ 132 ರನ್‌ಗಳ ಜೊತೆಯಾಟ ನೀಡುವ ಮೂಲಕ ಇನ್ನಿಂಗ್ಸ್‌ ಕಟ್ಟಿದರು. ಇದರಿಂದ ತಂಡದ ಮೊತ್ತ 300ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತು.

ಇಂಗ್ಲೆಂಡ್‌ ಪರ ಡೇವಿಡ್‌ ಮಲಾನ್‌ 31 ರನ್‌, ಜಾನಿ ಬೈರ್ಸ್ಟೋವ್ 59 ರನ್‌ (61 ಎಸೆತ, 81 ರನ್‌, 7 ಬೌಂಡರಿ, 1 ಸಿಕ್ಸರ್‌), ಜೋ ರೂಟ್‌ 60 ರನ್‌ (72 ಎಸೆತ, 4 ಬೌಂಡರಿ), ಬೆನ್‌ ಸ್ಟೋಕ್ಸ್‌ (Ben Stokes) 84 ರನ್‌ (76 ರನ್‌, 11 ಬೌಂಡರಿ, 2 ಸಿಕ್ಸರ್‌), ಜೋಸ್‌ ಬಟ್ಲರ್‌ (Jos Buttler) 27 ರನ್‌, ಹ್ಯಾರಿ ಬ್ರೂಕ್‌ 30 ರನ್‌ (17 ಎಸೆತ, 2 ಸಿಕ್ಸರ್‌, 2 ಬೌಂಡರಿ, ಮೊಯಿನ್‌ ಅಲಿ 8 ರನ್‌, ಡೇವಿಡ್‌ ವಿಲ್ಲಿ 15 ರನ್‌ ಬಾರಿಸಿದ್ರೆ, ಗಸ್ ಅಟ್ಕಿನ್ಸನ್ ಶೂನ್ಯ ಸುತ್ತಿದ್ದರು. ಕ್ರಿಸ್‌ವೋಕ್ಸ್‌ 4 ರನ್‌ ಮತ್ತು ಆದಿಕ್‌ ರಶೀದ್‌ ಯಾವುದೇ ರನ್‌ ಗಳಿಸಿದೇ ಅಜೇಯಾಗುಳಿದರು.

ಪಾಕಿಸ್ತಾನ ಪರ ಹ್ಯಾರಿಸ್‌ ರೌಫ್‌ 3 ವಿಕೆಟ್‌, ಶಾಹೀನ್‌ ಶಾ ಅಫ್ರಿದಿ ಮತ್ತು ಮೊಹಮ್ಮದ್‌ ವಸೀಮ್‌ ತಲಾ 2 ವಿಕೆಟ್‌, ಇಫ್ತಿಕಾರ್‌ ಅಹ್ಮದ್‌ 1 ವಿಕೆಟ್‌ ಪಡೆದರು.

Share This Article