ರೋ’ಹಿಟ್’ ದಾಖಲೆಯ ಶತಕ – ಗೆಲ್ಲಲು ಬಾಂಗ್ಲಾಗೆ 315 ರನ್ ಗುರಿ

Public TV
3 Min Read

ಬರ್ಮಿಂಗ್‍ಹ್ಯಾಮ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲುಂಡ ಕ್ರೀಡಾಂಗಣದಲ್ಲಿಯೇ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದೆ. ನಿರೀಕ್ಷೆಯಂತೆ ರನ್ ಹೊಳೆ ಹರಿಸಿದ ರೋಹಿತ್ ಶರ್ಮಾ 104 ರನ್, ರಾಹುಲ್ 77 ರನ್ ಹಾಗೂ ಪಂತ್‍ರ 48 ರನ್‍ಗಳ ನೆರವಿನಿಂದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತು.

ಟಾಸ್ ಗೆದ್ದ ನಾಯಕ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾದ ರೋಹಿತ್, ರಾಹುಲ್ ಜೋಡಿ ಮೊದಲ 5 ಓವರ್ ಗಳಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿದರು. ಪಂದ್ಯದ ಮೊದಲ ಓವರಿನಲ್ಲೇ ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಪಂದ್ಯದಲ್ಲಿ ಮಿಂಚುವ ಸೂಚನೆ ನೀಡಿದರು. ಆದರೆ 9 ರನ್ ಗಳಿಸಿದ್ದ ವೇಳೆ ಬಾಂಗ್ಲಾದ ತಮಿಮ್ ಇಕ್ಬಾಲ್ ರೋಹಿತ್‍ರ ಸುಲಭ ಕ್ಯಾಚ್ ಕೈಚೆಲ್ಲಿದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಂತೆ ಸಿಕ್ಕ ಅವಕಾಶ ಬಳಸಿಕೊಂಡ ರೋಹಿತ್ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. ರೋಹಿತ್ 45 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರೆ, ರಾಹುಲ್ 57 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದರು. ಇಬ್ಬರ ಜೋಡಿ ಮೊದಲ ವಿಕೆಟ್‍ಗೆ 180 ರನ್ ಜೊತೆಯಾಟ ನೀಡಿತು. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ರಾಹುಲ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ 92 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ನೆರವಿನೊಂದಿಗೆ 77 ರನ್ ಸಿಡಿಸಿದರು.

ರೋಹಿತ್ ದಾಖಲೆ: 92 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 7 ಬೌಂಡರಿ, 5 ಸಿಕ್ಸರ್ ಗಳ ನೆರವಿನಿಂದ 104 ರನ್ ಗಳಿಸಿದರು. ಏಕದಿನ ಕ್ರಿಕೆಟ್ ನಲ್ಲಿ 26 ಶತಕಗಳನ್ನು ಪೂರ್ಣಗೊಳಿಸಿದ ರೋಹಿತ್, ಟೂರ್ನಿಯಲ್ಲಿ 500 ಪ್ಲಸ್ ರನ್ ಗಳಿಸಿದ ಭಾರತ ಆಟಗಾರ ಎನಿಸಿಕೊಂಡರು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ 4 ಶತಕ ಸಿಡಿಸಿದ 2ನೇ ಆಟಗಾರ ಹಾಗೂ ಭಾರತ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಈ ಬಾರಿಯ ಟೂರ್ನಿಯಲ್ಲಿ 544 ರನ್ ಗಳಿಸಿರುವ ರೋಹಿತ್ ಟಾಪ್ ರನ್ ಸ್ಕೋರರ್ ಪಟ್ಟಿಯಲ್ಲೂ ಮೊದಲ ಸ್ಥಾನ ಪಡೆದಿದ್ದು, 516 ರನ್ ಗಳಿಸಿರುವ ಆಸೀಸ್ ನ  ಡೇವಿಡ್ ವಾರ್ನರ್ 2ನೇ ಸ್ಥಾನದಲ್ಲಿದ್ದಾರೆ. 2003 ರಲ್ಲಿ 673 ರನ್ ಗಳಿಸಿ ದಾಖಲೆ ನಿರ್ಮಿಸಿದ್ದ ಸಚಿನ್ ಅವರನ್ನು ಹಿಂದಿಕ್ಕಲು ರೋಹಿತ್‍ಗೆ ಕೇವಲ 129 ರನ್ ಅಗತ್ಯವಿದೆ. ವಿಶ್ವಕಪ್ ಟೂರ್ನಿಯಲ್ಲಿ ವೇಗವಾಗಿ ಅಂದರೆ 15 ಇನ್ನಿಂಗ್ಸ್ ಗಳಲ್ಲಿ 5 ಶತಕ ಸಿಡಿಸಿದ ದಾಖಲೆಗೆ ರೋಹಿತ್ ಪಾತ್ರರಾಗಿದ್ದಾರೆ.

33.5 ಓವರ್ ಗಳಲ್ಲಿ 200 ರನ್ ಗಡಿ ದಾಟಿದ ಟೀಂ ಇಂಡಿಯಾ ರನ್ ವೇಗಕ್ಕೆ ಕೊಹ್ಲಿ ಸಾಥ್ ನೀಡಿದರು. ಆದರೆ 26 ರನ್ ಗಳಿಸಿದ್ದ ವೇಳೆ ಮುಸ್ತಾಫಿರ್ ರೆಹಮಾನ್‍ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಸ್ಫೋಟಕ ಆಟಗಾರ ಪಾಂಡ್ಯರನ್ನು ಶೂನ್ಯಕ್ಕೆ ಔಟ್ ಮಾಡಿದ ರೆಹಮಾನ್ ಭಾರತಕ್ಕೆ ಡಬಲ್ ಅಘಾತ ನೀಡಿದರು. ಕೊಹ್ಲಿ, ಹಾರ್ದಿಕ್ ವಿಕೆಟ್ ಕಳೆದುಕೊಂಡರು ಕೂಡ ಬಿರುಸಿನ ಆಟ ಪ್ರದರ್ಶಿಸಿದ ಯುವ ಆಟಗಾರ ರಿಷಬ್ ಪಂತ್ ರನ್ ವೇಗ ಕಡಿಮೆಯಾಗದಂತೆ ಎಚ್ಚರ ವಹಿಸಿದರು. 41 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಿಡಿಸಿದ ಪಂತ್ 48 ರನ್ ಗಳಿಸಿ ಅರ್ಧ ಶತಕದ ಅಂಚಿನಲ್ಲಿ ಎಡವಿದರು.

ಮಿಂಚಿದ ರಹಮಾನ್: ಮಧ್ಯಮ ಕ್ರಮಾಂಕದ ಪ್ರಮುಖ ವಿಕೆಟ್‍ಗಳನ್ನು ಪಡೆದು ಭಾರತ ರನ್ ವೇಗಕ್ಕೆ ಕಡಿವಾಣ ಹಾಕಿದ ಮುಸ್ತಾಫಿರ್ ರಹಮಾನ್ ಅಂತಿಮ ಹಂತದಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳನ್ನು ಕಾಡಿದರು. ಪಂದ್ಯದಲ್ಲಿ 5 ವಿಕೆಟ್ ಸಾಧನೆ ಮಾಡಿದ ರಹಮಾನ್ ಟೀಂ ಇಂಡಿಯಾ ಬೃಹತ್ ರನ್ ಗುರಿಗೆ ತಡೆ ಒಡ್ಡಿದರು. ಧೋನಿ ಹಾಗೂ ರಿಷಬ್ ಪಂತ್ ಅವರ ಜೋಡಿ 5ನೇ ವಿಕೆಟ್‍ಗೆ 40 ರನ್ ನೀಡಿದ್ದು ಹೊರತು ಪಡಿಸಿದರೆ ಬಳಿಕ ಬಂದ ದಿನೇಶ್ ಕಾರ್ತಿಕ್ 8 ರನ್, ಭುವನೇಶ್ವರ್ ಕುಮಾರ್ 2 ರನ್, ಮೊಹಮ್ಮದ್ ಶಮಿ 1 ರನ್ ಗಳಿಸಿ ಔಟಾದರು. ಬಾಂಗ್ಲಾ ಪರ ಮುಸ್ತಾಫಿಜುರ್ ರಹಮಾನ್ 5 ವಿಕೆಟ್ ಪಡೆದರೆ, ಶಕಿಬ್ ಅಲ್ ಹಸನ್, ರುಬೆಲ್, ಸರ್ಕರ್ ತಲಾ 1 ವಿಕೆಟ್ ಪಡೆದರು.

ನಾಲ್ವರು ವಿಕೆಟ್ ಕೀಪರ್: ಪಂದ್ಯದಲ್ಲಿ ಆಡುವ ಅವಕಾಶ ಪಡೆದ ದಿನೇಶ್ ಕಾರ್ತಿಕ್ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ (2004) 15 ವರ್ಷಗಳ ಬಳಿಕ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದರು. ದಿನೇಶ್ ಕಾರ್ತಿಕ್ 2007ರ ವಿಶ್ವಕಪ್ ಟೂರ್ನಿಗೆ ಕಾರ್ತಿಕ್ ಆಯ್ಕೆ ಆಗಿದ್ದರು ಕೂಡ ಒಂದು ಪಂದ್ಯವನ್ನು ಆಡಿರಲಿಲ್ಲ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಕೌಟ್ ಹಂತದಲ್ಲೇ ಹೊರ ನಡೆದಿತ್ತು. ಇತ್ತ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಗಳಾದ ಧೋನಿ, ರಿಷಬ್ ಪಂತ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ನಾಲ್ವರು ಆಡಿದ್ದು ವಿಶೇಷವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *