Exclusive: PWDಯಲ್ಲಿ ದುಡ್ಡು ಕೊಟ್ರೆ ಮಾತ್ರ ಕೆಲಸ- ಪತ್ರ ಬರೆದು ದೂರು ಕೊಟ್ಟ ಮಹಿಳಾ ಅಧಿಕಾರಿ

Public TV
2 Min Read

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ದುಡ್ಡು ನೀಡಿದರೆ ಮಾತ್ರ ಕೆಲಸ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿ ಐಎಎಸ್ ಅಧಿಕಾರಿಯೊಬ್ಬರು ಪಿಡಬ್ಲ್ಯುಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅವರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಲೋಕೊಪಯೋಗಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ.

ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಈ ಕುರಿತು ಪತ್ರ ಬರೆದಿದ್ದು, ನಗರದಲ್ಲಿ ತಾವು ವಾಸವಿರುವ ಕೆಪಿಡಬ್ಲ್ಯುಡಿ ವಸತಿ ಗೃಹ ರಿಪೇರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಕುರಿತು ಪಿಡಬ್ಲ್ಯುಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರೂ ಕೆಲಸವೇ ಆಗಿಲ್ಲ. ಅಲ್ಲದೇ ಅಸಿಸ್ಟೆಂಟ್ ಎಂಜಿನಿಯರ್ ಗಿರೀಶ್‍ಗೆ ಸೂಚಿಸಿದ್ದರೂ ಕೆಲಸ ಮಾಡಿಲ್ಲ. ಇಲಾಖೆಯಲ್ಲಿ ದುಡ್ಡು ಕೊಡದಿದ್ದರೆ ಇಲ್ಲಿ ಕೆಲಸವೇ ಆಗಲ್ಲ. ಹಣ ನೀಡಿದರೆ ಮಾತ್ರ ಕೆಲಸ ಆಗುತ್ತೆ ಎಂದು ಪತ್ರ ಬರೆದಿದ್ದಾರೆ.

ತಾವು ವಾಸಿಸುವ ಜೀವನ್ ಭೀಮಾ ನಗರದಲ್ಲಿ ಕುರಿತ ಅವ್ಯವಸ್ಥೆಯ ಬಗ್ಗೆ ನಿಮ್ಮ ಗಮನಕ್ಕೆ ತಂದಿದ್ದು, ನೀವು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ನಿಮ್ಮ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಇಲಾಖೆಯ ಎಇ, ಎಇಇ ಅಧಿಕಾರಿಗಳು ಬಳಿಕ ಯಾವುದೇ ಕೆಲಸ ಮಾಡದೇ ಸುಮ್ಮನಾಗಿದ್ದಾರೆ. ಈ ಕುರಿತು ಅವರನ್ನು ಸಂಪರ್ಕಿಸಲು ಎಷ್ಟು ಸಾರಿ ಯತ್ನಿಸಿದರೂ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇಲ್ಲಿನ ಅವ್ಯವಸ್ಥೆಯಿಂದ ಕಾನೂನು ಬಾಹಿರ ಚಟುವಟಿಕೆಗಳು ಕೂಡ ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ.

ಪತ್ರದಲ್ಲಿ ಮತ್ತೊಂದು ಮುಖ್ಯ ಅಂಶವನ್ನು ನಮೂದಿಸಿದ್ದು, ತಾವು ವಾಸಿಸುವ ಪಕ್ಕದ ಪ್ರದೇಶ ನಿವಾಸಿಗಳು ಹಣ ನೀಡಿದಕ್ಕೆ ಮಾತ್ರ ಕೆಲಸ ಮಾಡಿದ್ದಾರೆ. ನಾನು ಹಣ ನೀಡಿಲ್ಲ ಎಂಬ ಕಾರಣಕ್ಕೆ ಕೆಲಸ ಮಾಡಿಲ್ಲ. ಈ ಪ್ರದೇಶದ ಎಇ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದ್ದಾರೆ.

2009ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಪಲ್ಲವಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಡಿಪಿಎಆರ್) ಜಾಗೃತ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2018ರ ಜುಲೈ 18ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅವರು, ಪ್ರಸ್ತುತ ಹೆರಿಗೆ ರಜೆಯಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *