I2U2 ಶೃಂಗಸಭೆ – 6 ಕ್ಷೇತ್ರಗಳಲ್ಲಿ 4 ದೇಶಗಳು ಜಂಟಿಯಾಗಿ ಹೂಡಿಕೆ

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು I2U2(ಭಾರತ, ಇಸ್ರೇಲ್, ಅಮೆರಿಕ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್) ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಪಿಎಂ ಯೈರ್ ಲ್ಯಾಪಿಡ್ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್‌ನ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೊದಲ ಶೃಂಗಸಭೆಯಿಂದಲೇ I2U2 ಸಕಾರಾತ್ಮಕ ಕಾರ್ಯಸೂಚಿಯನ್ನು ಸ್ಥಾಪಿಸಿದೆ. ನಾವು ವಿವಿಧ ವಲಯಗಳಲ್ಲಿ ಜಂಟಿ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೇವೆ ಹಾಗೂ ಮುಂದುವರಿಯಲು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.

I2U2 ಚೌಕಟ್ಟಿನ ದೇಶಗಳು ನೀರು, ಇಂಧನ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಹಾಗೂ ಆಹಾರ ಭದ್ರತೆಯಂತಹ 6 ಪ್ರಮುಖ ಕ್ಷೇತ್ರಗಳಲ್ಲಿ ಜಂಟಿಯಾಗಿ ಹೂಡಿಕೆಯನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದೇವೆ. I2U2ನ ದೃಷ್ಟಿ ಮತ್ತು ಕಾರ್ಯಸೂಚಿ ಪ್ರಗತಿಪರ ಮತ್ತು ಪ್ರಾಯೋಗಿಕವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ಇತಿಹಾಸದ ಪುಟ ಸೇರಲಿದೆ ನೂರು ವರ್ಷಗಳ ಇತಿಹಾಸವುಳ್ಳ ಸಂಸತ್ ಭವನ – ಕೊನೆಯ ಅಧಿವೇಶನಕ್ಕೆ ಸಿದ್ಧತೆ

ಹೆಚ್ಚುತ್ತಿರುವ ಜಾಗತಿಕ ಅನಿಶ್ಚಿತತೆಯ ನಡುವೆ ನಮ್ಮ ಚೌಕಟ್ಟು ಪ್ರಾಯೋಗಿಕ ಸಹಕಾರಕ್ಕೆ ಉತ್ತಮ ಮಾದರಿಯಾಗಿದೆ. ನಮ್ಮ ಪರಸ್ಪರ ಸಹಕಾರ, ಶಕ್ತಿ, ಬಂಡವಾಳಗಳಿಂದ ನಮ್ಮ ಕಾರ್ಯಸೂಚಿಯನ್ನು ವೇಗಗೊಳಿಸಬಹುದು ಹಾಗೂ ಜಾಗತಿಕ ಆರ್ಥಿಕತೆಗೆ ಪ್ರಮುಖ ಕೊಡುಗೆಗಳನ್ನು ನೀಡಬಹುದು ಎಂದರು.

ಈ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಂದು ನಾವು ಎದುರಿಸುತ್ತಿರುವ ಬಹಮುಖ್ಯ ಸವಾಲುಗಳೆಂದರೆ ಹವಾಮಾನ ವೈಪರಿತ್ಯ ಹಾಗೂ ಬೆಳೆಯುತ್ತಿರುವ ಆಹಾರ ಕೊರತೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದ ಇಂಧನ ಮಾರುಕಟ್ಟೆಯೂ ಹದಗೆಟ್ಟಿದೆ ಎಂದರು. ಇದನ್ನೂ ಓದಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ – ಕೇರಳದ ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡ ಸೋಂಕು

ಇದೀಗ I2U2 ಗುಂಪು ಮುಂದಿನ 3 ವರ್ಷಗಳಲ್ಲಿ ಜಂಟಿಯಾಗಿ ಹೂಡಿಕೆ ಮಾಡಿ, ಒಟ್ಟಿಗೆ ಅಭಿವೃದ್ಧಿಪಡಿಸಬಹುದಾದ ಯೋಜನೆಗಳಲ್ಲಿ ಕೆಲಸ ಮಾಡಲಿವೆ. ನಾವೆಲ್ಲರೂ ಜೊತೆಯಾಗಿ ದೊಡ್ಡ ಸಾಧನೆಯನ್ನು ಮಾಡಬಹುದಾಗಿದೆ ಎಂದು ಬೈಡನ್ ಹೇಳಿದರು.

ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್ ಮಾತನಾಡಿ, ನಾವು ಜಗತ್ತನ್ನು ಉತ್ತಮವಾಗಿ ಬದಲಿಸಲು ಬಯಸುತ್ತೇವೆ. ಇದನ್ನು ಸಾಧಿಸಲು ಸಂಪನ್ಮೂಲಗಳನ್ನು ಹೇಗೆ ಒಟ್ಟುಗೂಡಿಸಬೇಕು ಎಂದು ತಿಳಿದಿರುವ ದೇಶಗಳಿಂದ ಮಾತ್ರವೇ ಪರಿಹಾರ ಸಿಗಲು ಸಾಧ್ಯ ಎಂದರು.

ಖಾಸಗಿ ಮಾರುಕಟ್ಟೆಯನ್ನು ಪಾಲುದಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. 4 ವಿಭಿನ್ನ ದೇಶಗಳಾಗಿದ್ದರೂ ಮೂಲಸೌಕರ್ಯ ಅಭಿವೃದ್ಧಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪರಿಸರದ ಮೇಲೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವುದು ಸೇರಿದಂತೆ ನಾವೆಲ್ಲರೂ ಒಂದೇ ಗುರಿಯನ್ನು ಹೊಂದಿದ್ದೇವೆ ಎಂಬುದು ಸ್ಪಷ್ಟವಾಗಿದೆ ಎಂದು ಇಸ್ರೇಲ್ ಪ್ರಧಾನಿ ತಿಳಿಸಿದರು.

ಒಟ್ಟಿನಲ್ಲಿ I2U2 ಮೊದಲ ನಾಯಕರ ಸಭೆಯಲ್ಲಿ ಭಾರತ, ಇಸ್ರೇಲ್, ಅಮೆರಿಕ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್ ದೇಶಗಳು ಜಂಟಿಯಾಗಿ ನೀರು, ಶಕ್ತಿ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಹಾಗೂ ಆಹಾರಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ನಿರ್ಧರಿಸಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *