ಚಪ್ಪಲಿಯಿಂದ ಹೊಡೆದಿದ್ದು ತುಂಬಾ ಬೇಜಾರಾಗಿದೆ, ಯಾವ್ದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ: ಆಟೋ ಚಾಲಕ

Public TV
1 Min Read

ಬೆಂಗಳೂರು: ಚಪ್ಪಲಿಯಿಂದ ಹೊಡೆದಾಗ ನನ್ನ ಮನಸ್ಸಿಗೆ ತುಂಬಾ ಬೇಜಾರಾಗಿದೆ, ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ ಎಂದು ಹಿಂದಿ ಮಹಿಳೆಯಿಂದ ಹಲ್ಲೆಗೊಳಗಾದ ಆಟೋ ಚಾಲಕ ಲೋಕೇಶ್ ಹೇಳಿದ್ದಾರೆ.

ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಹಲ್ಲೆ ಮಾಡಿದ ಮಹಿಳೆಯಲ್ಲಿ ಪಶ್ಚಾತ್ತಾಪ ಕಾಣುತ್ತಿದೆ. ಭಾನುವಾರ ಮಹಿಳೆ ಹಾಗೂ ಆಕೆಯ ಪತಿ ಬಂದು ಕ್ಷಮೆ ಕೇಳಿದ್ದಾರೆ. ಆದರೆ ಚಪ್ಪಲಿಯಿಂದ ಹೊಡೆದಾಗ ನನ್ನ ಮನಸ್ಸಿಗೆ ತುಂಬಾ ಬೇಸರ ಆಗಿತ್ತು. ನಾನು ಎರಡು ದಿನ ಮನೆಯವರ ಜೊತೆ ಮಾತನಾಡಿಲ್ಲ. ಮುಖ ತೋರಿಸಲು ಆಗುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಚಪ್ಪಲಿಯಿಂದ ಹೊಡೆದ ಪ್ರಕರಣ – ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಂಪತಿ

ಚಪ್ಪಲಿಯಿಂದ ಹೊಡೆದ ವೀಡಿಯೋ ವೈರಲ್ ಆದ ಬಳಿಕ ಮಹಿಳೆಯ ವಿರುದ್ಧ ಆಕ್ರೋಶ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಮಹಿಳೆ ಹಾಗೂ ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದರು. ಜೊತೆಗೆ ಎಲ್ಲಾ ಕನ್ನಡಿಗರು ನಮ್ಮನ್ನು ಕ್ಷಮಿಸಿ. ಆಟೋ ಚಾಲಕರ ಬಗ್ಗೆ ಗೌರವವಿದೆ. ಬೆಂಗಳೂರನ್ನು ಪ್ರೀತಿಸುತ್ತೇವೆ. ಇಲ್ಲಿನ ವಾತಾವರಣವನ್ನು ಪ್ರೀತಿಸುತ್ತೇವೆ ಎಂದಿದ್ದರು.

ಘಟನೆ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ (Bellanduru Police Station) ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಭಾನುವಾರ ಪೊಲೀಸರು ಮಹಿಳೆಯನ್ನು ಕರೆಸಿ, ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ವಿಚಾರಣೆ ವೇಳೆ, ಆಟೋ ಚಾಲಕನ ಮೇಲೆ ಹಲ್ಲೆ ಮಾಡಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದಳು.

ಘಟನೆ ಏನು?
ಬೆಳ್ಳಂದೂರಿನ ಸೆಂಟ್ರಲ್ ಮಾಲ್ ಬಳಿ ಗರ್ಭಿಣಿ ಮಹಿಳೆಯೊಬ್ಬರು ಆಸ್ಪತ್ರೆಗೆ ತೆರಳಿ ವಾಪಸ್ ಆಗುತ್ತಿದ್ದರು. ಈ ವೇಳೆ ಬೆಳ್ಳಂದೂರು ಬಳಿ ಆಕೆಯ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಆಟೋ ಡಿಕ್ಕಿಯಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಆಟೋ ಡ್ರೈವರ್ ಬೈದು ಹಲ್ಲೆಗೆ, ಯತ್ನಿಸಿದ್ದ. ಹೀಗಾಗಿ ಕೋಪಗೊಂಡು ಚಪ್ಪಲಿಯಿಂದು ಹಲ್ಲೆ ಮಾಡಿದೆ ಎಂದು ಪೊಲೀಸರ ಮುಂದೆ ಮಹಿಳೆ ಹೇಳಿಕೊಂಡಿದ್ದರು. ಇದನ್ನೂ ಓದಿ: ಬೆಂಗಳೂರು | ಆಟೋ ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಮಹಿಳೆಯ ವಿಚಾರಣೆ

Share This Article