ಯಾರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡ್ತೀನಿ: ಭವಾನಿ ರೇವಣ್ಣ

Public TV
3 Min Read

ಹಾಸನ: ವಿಧಾಸಭಾ ಚುನಾವಣೆಯಲ್ಲಿ (Assembly Elections) ಸ್ಪರ್ಧಿಸುವಂತೆ ಸಾಕಷ್ಟು ಜನ ನನಗೆ ಒತ್ತಡ ಹೇರುತ್ತಿದ್ದಾರೆ. ಹಾಸನ (Hassan) ವಿಧಾನಸಭಾ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡುತ್ತೇನೆ. ಜೆಡಿಎಸ್ (JDS) ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ ಎಂದು ಭವಾನಿ ರೇವಣ್ಣ (Bhavani Revanna) ಹೇಳಿದ್ದಾರೆ.

ಹಾಸನದ ಎರಡನೇ ವಾರ್ಡ್‌ನ ಅಶೋಕ ಬಡಾವಣೆಯಲ್ಲಿ 12.40 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಪುತ್ರ ಹಾಗೂ ಸಂಸದ ಪ್ರಜ್ವಲ್ ಪರವಾಗಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯಾರಿಗೆ ಟಿಕೆಟ್ ಕೊಟ್ಟರೂ ಭವಾನಿಯಾಗಿ, ರೇವಣ್ಣ ಅವರ ಪತ್ನಿಯಾಗಿ, ಪ್ರಜ್ವಲ್, ಸೂರಜ್ ಅವರ ತಾಯಿಯಾಗಿ ಕಾರ್ಯಕರ್ತರ ಜೊತೆ ಏನು ಕೆಲಸ ಮಾಡುತ್ತಿದ್ದೇನೋ, ಮುಂದೆಯೂ ಅದೇ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಸಾರ್ವಜನಿಕರು ನನ್ನನ್ನು ತಮ್ಮ ಮನೆ ಮಗಳು ಎನ್ನುವ ಭಾವನೆಯಲ್ಲಿ ಕಾರ್ಯಕ್ರಮಕ್ಕೆ ಕರೆದಾಗ ಬರುತ್ತಿದ್ದೇನೆ. ನನ್ನ ಮಕ್ಕಳು ಮಾತ್ರ ಅಲ್ಲ, ದೇವೇಗೌಡರ ರಾಜಕೀಯ ಜೀವನದಲ್ಲಿ ಹಾಸನದ ಜನರ ಜೊತೆ ನಿಂತಿದ್ದಾರೆ. ಅವರು ಕರೆದಾಗ ಬರದೆ ಇರಬಾರದು ಎನ್ನುವ ಕಾರಣಕ್ಕೆ ಬರುತ್ತಾ ಇದ್ದೇನೆ ಅಷ್ಟೇ. ಅದನ್ನು ಬಿಟ್ಟರೆ ಬೇರೆ ಯಾವುದೇ ಚರ್ಚೆ ಇಲ್ಲ ಎಂದರು.

ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುತ್ತೇನೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಬೆಂಗಳೂರಿನಲ್ಲಿ ಇರಲಿಲ್ಲ. ದೆಹಲಿಯಲ್ಲಿ ನಡೆದ ಡೈರಿ ಶೃಂಗಸಭೆಯಲ್ಲಿ ನಮ್ಮ ಕುಟುಂಬದವರೆಲ್ಲರೂ ಭಾಗವಹಿಸಿದ್ದೆವು. ಅವರು ಏನು ಮಾತನಾಡಿದ್ದಾರೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ತೆರವು ಪ್ರಹಸನಕ್ಕೆ ಬಿತ್ತಾ ಬ್ರೇಕ್..?- ವಿಲ್ಲಾಗಳ ಕಡೆ ಮುಖಮಾಡದ ಜೆಸಿಬಿ!

ನನ್ನ ಬೆಂಬಲಿಗರು ತುಂಬಾ ಒತ್ತಡ ಹೇರುತ್ತಿದ್ದಾರೆ. ದಿನ ಬೆಳಗ್ಗೆಯಾದರೆ ಫೋನ್ ಮಾಡುತ್ತಿದ್ದಾರೆ. ಮನೆಯ ಬಳಿ ಬಂದು ಹಾಸನದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಹಾಸನಕ್ಕೆ ಬಂದಾಗ, ಹೊಳೆನರಸೀಪುರದಲ್ಲಿದ್ದಾಗ, ಹಲವಾರು ಕಾರ್ಯಕ್ರಮಗಳಲ್ಲಿ, ಎಲ್ಲಾ ಕಡೆ ತುಂಬಾ ಒತ್ತಡ ಹಾಕುತ್ತಿದ್ದಾರೆ. ಆದರೆ ಈ ವಿಷಯದಲ್ಲಿ ನಾನಾಗಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಕುಟುಂಬದಲ್ಲಿ ಹಿರಿಯರಿದ್ದಾರೆ, ಕುಮಾರಣ್ಣ, ದೇವೇಗೌಡರು, ರೇವಣ್ಣ ಇದ್ದಾರೆ. ಇಲ್ಲಿನ ಶಾಸಕರು, ಮುಖಂಡರು, ಕಾರ್ಯಕರ್ತರು ಇದ್ದಾರೆ. ಹಾಸನದಲ್ಲಿ ಮಹಿಳೆಯರು ನನ್ನ ಮೇಲೆ ಹೆಚ್ಚಿನ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರೆಲ್ಲ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧಳಾಗಿರುತ್ತೇನೆ, ನಾನೇ ಸ್ಪರ್ಧಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ ಎಂದರು.

ಬೇಲೂರು, ಕೆ.ಆರ್ ಪೇಟೆ, ಕೆ.ಆರ್ ನಗರದಿಂದಲೂ ನನ್ನ ಹೆಸರು ಕೇಳಿಬಂದಿತ್ತು. 2004 ರಿಂದಲೂ ಎಲ್ಲಾ ಕಡೆ ನನಗೆ ಒತ್ತಡ ಇತ್ತು. ಅವತ್ತು ಎಲ್ಲರೂ ಸೇರಿ ಏನು ತೀರ್ಮಾನ ತೆಗೆದುಕೊಂಡಿದ್ದರು ಅದರಂತೆ ನಡೆದುಕೊಂಡಿದ್ದೇನೆ. ಈಗಲೂ ಅಷ್ಟೇ, ಎಲ್ಲರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು.

ಶಾಸಕ ಪ್ರೀತಂ ಗೌಡ ಸವಾಲು ಹಾಕಿರುವ ಬಗ್ಗೆ ಮಾತನಾಡಿದ ಭವಾನಿ ರೇವಣ್ಣ, ಅವರು ತುಂಬಾ ಬುದ್ಧಿವಂತರಿದ್ದಾರೆ. ಅವರಿಗೆ ಉತ್ತರ ಕೊಡವಷ್ಟು ನಾನು ದೊಡ್ಡವಳಲ್ಲ. ಅವರ ಸವಾಲಿಗೆ ರೇವಣ್ಣನವರು, ನಮ್ಮ ಪಕ್ಷದ ಮುಖಂಡರು, ಹಿರಿಯರು ಉತ್ತರ ಕೊಡುತ್ತಾರೆ. ನಾನು ಅದರ ಬಗ್ಗೆ ಏನೂ ಯೋಚನೆ ಮಾಡಲ್ಲ. ನನಗೆ ಬೇಡವಾದ ವಿಷಯಗಳನ್ನು ನೋಡಲು ಹೋಗಲ್ಲ, ಕೇಳಲು ಹೋಗಲ್ಲ. ಅದರ ಬಗ್ಗೆ ನಮ್ಮ ಮನೆಯಲ್ಲಿಯೂ ಚರ್ಚೆ ಮಾಡಿಲ್ಲ, ಮಾತು ಆಡಲ್ಲ ರೇವಣ್ಣ ಸಾಹೇಬ್ರು ಡೈಲಿ ಮನೆಗೆ ಬರುವಾಗ ತಡರಾತ್ರಿ ಆಗುತ್ತದೆ. ಅವರು ಬಂದಾಗ ಫುಲ್ ಟೈಯರ್ಡ್ ಆಗಿರ್ತಾರೆ. ಹಾಗಾಗಿ ನಾವೇನೂ ಟಿಕೆಟ್ ವಿಚಾರವಾಗಿ ಮನೆಯಲ್ಲಿ ಚರ್ಚೆ ಮಾಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಎರಡು ವರ್ಷಗಳಿಂದ ನನ್ನ ಫೈಲನ್ನೇ ಅಧಿಕಾರಿಗಳು ಕ್ಲಿಯರ್ ಮಾಡಿಲ್ಲ: ಮುರುಗೇಶ್ ನಿರಾಣಿ ಅಸಹಾಯಕತೆ

ಶಾಸಕ ಹೆಚ್.ಎಸ್ ಪ್ರಕಾಶ್ ಹುಟ್ಟುಹಬ್ಬ ಕಾರ್ಯಕ್ರಮ ನನಗೆ ಗೊತ್ತೇ ಇಲ್ಲ ಎಂಬ ರೇವಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೂ ಆ ವಿಷಯ ಗೊತ್ತಿಲ್ಲ. ನಾನು ಅವರಿಗಿಂತ 2 ದಿನ ಮುಂಚೆಯೇ ದೆಹಲಿಗೆ ಹೋಗಿದ್ದೆ. ನನಗೆ ನಿಜವಾಗಲು ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ. ನನಗೆ ಯಾರೂ ಕೂಡ ಫೋನ್ ಮಾಡಿಲ್ಲ, ಯಾರೂ ಆಹ್ವಾನ ನೀಡಿಲ್ಲ. ಆ ಫಂಕ್ಷನ್ ಇದೆ ಅನ್ನೋದೆ ನನಗೆ ಗೊತ್ತಿಲ್ಲ. ಅಣ್ಣ-ತಮ್ಮಂದಿರು ಮಾತನಾಡಿರುವ ವಿಷಯ ನನಗೆ ಗೊತ್ತಿಲ್ಲ ಎಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *