ರಾಜ್ಯದ ಹಿತಕ್ಕಾಗಿ ಕೆಲವೊಮ್ಮೆ ಸ್ವಾರ್ಥ ಚಿಂತನೆ ಮಾಡುವೆ- ಜಗ್ಗೇಶ್

Public TV
2 Min Read

ಬೆಂಗಳೂರು: ರಾಜ್ಯದಲ್ಲಿದ್ದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಮಂಗಳವಾರದಂದು ಪತನವಾಗಿದೆ. ಈ ಹಿನ್ನೆಲೆಯಲ್ಲಿ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದು, ನಾಡಿಗೆ ಒಳ್ಳೆಯ ಕಾಲ ಬಂದಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದೇಶದಲ್ಲಿ ಯಾವ ಪಕ್ಷ ಆಡಳಿತದಲ್ಲಿರುತ್ತದೆಯೇ ಅದೇ ಪಕ್ಷ ರಾಜ್ಯದಲ್ಲೂ ಅಧಿಕಾರದಲ್ಲಿದ್ದರೆ ಮಾತ್ರ ರಾಜ್ಯ ಮತ್ತು ದೇಶ ಏಕಮುಖವಾಗಿ ಅಭಿವೃದ್ಧಿಯತ್ತ ಸಾಗಬಹುದು ಎಂದು ಹಲವರು ಹೇಳುತ್ತಾರೆ. ಆದ್ರೆ, ನಮ್ಮ ಕರ್ನಾಟಕದಲ್ಲಿ ಬಹುತೇಕ ಈ ವಿಚಾರದಲ್ಲಿ ವಿರುದ್ಧವಾಗಿಯೇ ಆಗಿದೆ. ಉದಾಹರಣೆಗೆ ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸುತಿತ್ತು. ಹಾಗೆಯೇ ರಾಜ್ಯದಲ್ಲಿ ಕಾಂಗ್ರೆಸ್ ಇದ್ದಾಗ ಕೇಂದ್ರದಲ್ಲಿ ಬಿಜೆಪಿ ಆಡಳಿತವಿತ್ತು, ಈ ಬಾರಿ ಕೂಡ ಕೇಂದ್ರದಲ್ಲಿ ಬಿಜೆಪಿ ಆಡಳಿತವಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಆದರೆ ಇದೀಗ ಮೈತ್ರಿ ಸರ್ಕಾರ ಪತನವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬರಲು ಸಜ್ಜಾಗಿದೆ.

ಇದೇ ಬೆನ್ನಲ್ಲಿ ಜಗ್ಗೇಶ್ ಅವರು ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿರುವ ಪಕ್ಷದ ಸರ್ಕಾರವೇ ರಾಜ್ಯದಲ್ಲೂ ಬಂದರೆ ನಾಡಿಗೆ ಒಳ್ಳೆಯದು. ನಾನು ರಾಜ್ಯದ ಹಿತಕ್ಕಾಗಿ ಕೆಲವೊಮ್ಮೆ ಸ್ವಾರ್ಥ ಚಿಂತನೆ ಮಾಡುವೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ನಾನು ರಾಜ್ಯದ ಹಿತಕ್ಕಾಗಿ ಕೆಲವೊಮ್ಮೆ ಸ್ವಾರ್ಥ ಚಿಂತನೆ ಮಾಡುವೆ. ರಾಜ್ಯ, ರಾಷ್ಟ್ರ ಸರ್ಕಾರ ಒಂದೇ ಇದ್ದಾಗ ಮಾತ್ರ ನಮ್ಮ ಪರಿಕಲ್ಪನೆಯ ಕನಸು ಸಫಲ. ಈಗ ಆ ಕಾಲ ಬಂದಿದೆ ಕನ್ನಡ ನಾಡಿಗೆ. ಕಳೆದುಕೊಂಡವರು ದುಃಖಿಸಬಹುದು. ಪಡೆದವರು ಹರ್ಷಿಸಿಸಬಹುದು. ದಯಮಾಡಿ ಸ್ವಾರ್ಥಕ್ಕಿಂತ ಸಮಾಜಕ್ಕೆ ಚಿಂತಿಸುವ. ಇಲ್ಲದಿದ್ದರೆ ಕ್ಷಮೆಯಿರದು ರಾಜಕೀಯ ಬದುಕಿಗೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‍ಗೆ ಪರ ಹಾಗೂ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ಮತ್ತೊಂದು ಟ್ವೀಟ್ ಮಾಡಿ, ಮಾತಾಡುವ ಹಕ್ಕು ಪ್ರತಿಯೊಬ್ಬರಿಗೂ ನಮ್ಮ ದೇಶದ ಶ್ರೇಷ್ಠ ಸಂವಿಧಾನ ನೀಡಿದೆ. ನನ್ನದು ನೇರನುಡಿ, ಎಲ್ಲರು ಒಪ್ಪುತ್ತಾರೆ ಎಂದು ಭಾವಿಸಿಲ್ಲ. ಅನಿಸಿಕೆಗೆ ಪರ ವಿರೋಧ ಸಹಜ. ವ್ಯಕ್ತಪಡಿಸುವಿಕೆ ಶ್ರೇಷ್ಠವಾಗಿದ್ದರೆ ಎಲ್ಲಾ ವರ್ಗವು ಚರ್ಚೆಮಾಡುತ್ತದೆ. ಕೆಟ್ಟ ಪದಪುಂಜ ವರ್ಜಿತವಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಟ ಜಗ್ಗೇಶ್ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕೊನೆಯ ಹಂತದಲ್ಲಿ ಟಿಕೆಟ್ ಸಿಕ್ಕ ಕಾರಣ, ನಿರೀಕ್ಷೆಯ ಪ್ರಚಾರ ಮಾಡಲು ಸಾಧ್ಯವಾಗದೇ, ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ವಿರುದ್ಧ ಸೋಲನ್ನು ಅನುಭವಿಸಿದ್ದರು. ಅಲ್ಲದೆ ಸಮಾಜದಲ್ಲಿ ನಡೆಯುತ್ತಿರುವ ಹಲವು ವಿಚಾರಗಳ ಬಗ್ಗೆ ಆಗಾಗ ಜಗ್ಗೇಶ್ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *