ಬೆಂಗಳೂರು: ನಾನು ನಾಳೆಯೇ ಶಿವಾಜಿನಗರ (Shivajinagar) ಸೇಂಟ್ ಮೇರಿಸ್ (St Mary) ಮೆಟ್ರೋ ನಿಲ್ದಾಣ ಮಾಡಿ ಎಂದು ಶಿಫಾರಸು ಮಾಡುತ್ತೇನೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ (Rizwan Arshad) ಹೇಳಿದ್ದಾರೆ.
ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರು ಇಡುವ ವಿಚಾರವಾಗಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಇನ್ನೂ ಶಿಫಾರಸು ಮಾಡಿಲ್ಲ. ಮೊನ್ನೆ ತಾನೇ ಶಿವಾಜಿನಗರ ಹಾಗೂ ಕ್ರೈಸ್ತ ಸಮುದಾಯದ ಬಹಳಷ್ಟು ಜನ ಮನವಿ ಮಾಡಿದ್ದಾರೆ. ಸೇಂಟ್ ಮೇರಿ ಮೆಟ್ರೋ ನಿಲ್ದಾಣ ಅಂತಾ ನಾಮಕರಣ ಮಾಡಿ ಅಂತಾ ಕೇಳಿಕೊಂಡಿದ್ದಾರೆ. ಆಗ ಸಿಎಂ ಸ್ಥಳೀಯ ಶಾಸಕರು ಏರಿಯಾ ಜನರಿಗೆ ಮಾತನಾಡಿ ಶಿಫಾರಸು ಕೊಡಲಿ. ಆ ಶಿಫಾರಸ್ಸನ್ನು ಕೇಂದ್ರಕ್ಕೆ ಕಳುಹಿಸಿಕೊಡುತ್ತೇನೆ ಎಂದಿದ್ದಾರೆ. ನಾನು ನಾಳೆಯೇ ಶಿವಾಜಿನಗರ ಸೇಂಟ್ ಮೇರಿಸ್ ಮೆಟ್ರೋ ನಿಲ್ದಾಣ ಎಂದು ಮಾಡಿ ಅಂತ ಶಿಫಾರಸು ಮಾಡುತ್ತೇನೆ ಎಂದರು. ಇದನ್ನೂ ಓದಿ: ಬೆಂಗಳೂರಿನ ಶಿವಾಜಿನಗರ ಮೆಟ್ರೋ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸಿಎಂ ವಿರೋಧ
ಶಿವಾಜಿನಗರ ಅನ್ನೋ ಹೆಸರು ತೆಗೆಯುತ್ತಿಲ್ಲ. ಶಿವಾಜಿ ಮಹಾರಾಜ ಗ್ರೇಟ್ ಮ್ಯಾನ್. ಇವರೆಲ್ಲಾ ಬಂದು ಅವರ ಹೆಸರು ಕಾಪಾಡಬೇಕಾ? ಶಿವಾಜಿನಗರ ಐತಿಹಾಸಿಕ ಪ್ರದೇಶ, ನನಗೆ ಹೆಮ್ಮೆಯಿದೆ. ಶಿವಾಜಿನಗರ-ಸೇಂಟ್ ಮೇರಿಸ್ ಬೆಸಿಲಿಕಾ ಅಂತಾ ಹೆಸರಲ್ಲಿದೆ. ಶಿವಾಜಿನಗರದಲ್ಲಿ ಎರಡು-ಮೂರು ಮೆಟ್ರೋ ನಿಲ್ದಾಣಗಳಿವೆ. ಒಂದು ಶಿವಾಜಿನಗರ-ಬೊಂಬು ಬಜಾರ್, ಇನ್ನೊಂದು ಶಿವಾಜಿ ನಗರ-ಸೇಂಟ್ ಬೆಸಲಿಕಾ ಅಂತಾ ಬರಲಿದೆ. ಬಾಲಗಂಗಾಧರ ಸ್ವಾಮೀಜಿ ಹೆಸರು ಸಹ ಇದೆ. ಜನ ಕೂಡಾ ಅದೇ ಹೇಳಿದ್ದಾರೆ. ಎರಡು-ಮೂರು ಸ್ಟೇಷನ್ ಇರುವುದರಿಂದ ಗುರುತಿಗಾಗಿ ಹೇಳಿದ್ದೇವೆ. ಸೇಂಟ್ ಬೆಸಲಿಕಾ ಮೆಟ್ರೋ ಸ್ಟೇಷನ್ ಹೆಸರಿಗೆ ವಿರೋಧ ಮಾಡೋರು ಯಾರೂ ಶಿವಾಜಿನಗರದಲ್ಲಿ ಇರೋದಿಲ್ಲ. ಎಷ್ಟು ವಿರೋಧ ಮಾಡುತ್ತಾರೋ ಅಷ್ಟು ಜೋರಾಗಿ ಶಿಫಾರಸು ಮಾಡುತ್ತೇನೆ. ನಾಳೆಯೇ ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಹ ಪೀಡಿತ ಉತ್ತರಾಖಂಡಕ್ಕೆ ಮೋದಿ ಭೇಟಿ – 1,200 ಕೋಟಿ ನೆರವು ಘೋಷಣೆ