ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ಸೇರಿಸೋ ತೀರ್ಪನ್ನು ಪರಿಶೀಲಿಸುತ್ತೇನೆ: ಸಿಜೆಐ

Public TV
1 Min Read

ನವದೆಹಲಿ: ದೆಹಲಿಯಲ್ಲಿರುವ (Delhi) ಬೀದಿ ನಾಯಿಗಳನ್ನು (Stray Dogs) ಆಶ್ರಯ ತಾಣಕ್ಕೆ ಸೇರಿಸುವ ಸುಪ್ರಿಂಕೋರ್ಟ್‌ನ (Supreme Court) ದ್ವಿಸದಸ್ಯ ಪೀಠದ ತೀರ್ಪನ್ನು ಪರಿಶೀಲಿಸುವುದಾಗಿ ಸಿಜೆಐ ಬಿ.ಆರ್. ಗವಾಯಿಯವರು (Chief Justice of India BR Gavai) ತಿಳಿಸಿದ್ದಾರೆ.

ಹೆಚ್ಚುತ್ತಿರುವ ನಾಯಿ ಕಡಿತ ಮತ್ತು ರೇಬೀಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯ ಸೋಮವಾರ ಎಲ್ಲಾ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಆದೇಶಿಸಿತ್ತು. ಇದಕ್ಕೆ ಪರ – ವಿರೋಧದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದ್ವಿಸದಸ್ಯ ಪೀಠದ ತೀರ್ಪಿಗೆ ಕಳವಳ ವ್ಯಕ್ತವಾಗುತ್ತಿರುವ ವಿಚಾರ ಬುಧವಾರ ಸಿಜೆಐ ಮುಂದೆ ಚರ್ಚೆಗೆ ಬಂತು. ಈ ವೇಳೆ, ತೀರ್ಪನ್ನು ಮರುಪರಿಶೀಲಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಸಿಜೆಐ ಹೇಳಿಕೆಯಿಂದ ಸುಪ್ರೀಂ ಕೋರ್ಟ್‌ನ ತೀರ್ಪಿನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಸಾವಿರಾರು ಪ್ರಾಣಿ ಪ್ರಿಯರಲ್ಲಿ ಭರವಸೆ ಮೂಡಿದೆ. ಇದನ್ನೂ ಓದಿ: 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ

ಇನ್ನೂ ಸುಪ್ರೀಂ ಕೋರ್ಟ್‌ ಆದೇಶಕ್ಕೆ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದೇಶವನ್ನು ಪರಿಶೀಲಿಸುವಂತೆ ನಟ ಜಾನ್ ಅಬ್ರಹಾಂ ಅವರು ಸಿಜೆಐಗೆ ತುರ್ತು ಮೇಲ್ಮನವಿ ಸಲ್ಲಿಸಿದ್ದರು.

ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ, ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಅವೈಜ್ಞಾನಿಕ ಮತ್ತು ಆರ್ಥಿಕವಾಗಿ ಇದು ಸಾಧ್ಯವಾಗದ ಕೆಲಸವಾಗಿದೆ ಎಂದಿದ್ದರು. ಇದು ದೆಹಲಿ ಪ್ರದೇಶದ ಪರಿಸರ ಸಮತೋಲನಕ್ಕೆ ಹಾನಿಕಾರಕ ಎಂದು ಟೀಕಿಸಿದ್ದರು.

ದೇಶದಲ್ಲಿ ಪ್ರಾಣಿಗಳ ಹಕ್ಕುಗಳ ರಕ್ಷಣೆಗೆ ಪ್ರಮುಖ ಧ್ವನಿಯಾಗಿರುವ ಪೆಟಾ ಸಂಸ್ಥೆ ಕೂಡ ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತ್ತು. ನಾಯಿಗಳ ಸ್ಥಳಾಂತರ ಅವೈಜ್ಞಾನಿಕ ಮತ್ತು ನಿಷ್ಪರಿಣಾಮಕಾರಿಯಾಗಿದೆ. ಸ್ಥಳಾಂತರದಿಂದ ನಾಯಿಗಳ ಸಂಖ್ಯೆ ಕಡಿಮೆ ಆಗುತ್ತದೆಯೇ ಹೊರತು, ರೇಬೀಸ್ ಕಡಿಮೆ ಮಾಡಲು ಅಥವಾ ನಾಯಿ ಕಡಿತದ ಘಟನೆಗಳನ್ನು ತಡೆಯುವುದು ಅಸಾಧ್ಯ ಎಂದು ಪೆಟಾದ ಹಿರಿಯ ನಿರ್ದೇಶಕಿ ಡಾ. ಮಿನಿ ಅರವಿಂದನ್ ಹೇಳಿದ್ದರು. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸೋದು ಅವೈಜ್ಞಾನಿಕ – ಸುಪ್ರೀಂ ತೀರ್ಪಿಗೆ PETA ಪ್ರತಿಕ್ರಿಯೆ

Share This Article