ಪೊಲೀಸ್ ಆಯುಕ್ತರ ಮನವಿ ಮೇರೆಗೆ ಚಿನ್ನಸ್ವಾಮಿ ಸ್ಟೇಡಿಯಂ ಕಾರ್ಯಕ್ರಮಕ್ಕೆ ಹೋಗಿದ್ದೆ: ಡಿಕೆಶಿ

By
2 Min Read

ಬೆಂಗಳೂರು: ಆರ್‌ಸಿಬಿ (RCB) ತಂಡದವರಿಗೆ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿ ಎಂದು ಪೊಲೀಸ್ ಆಯುಕ್ತರು ನನಗೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ನಾನು ಆ ಕಾರ್ಯಕ್ರಮಕ್ಕೆ ಹೋಗಿ ಸೂಚನೆ ನೀಡಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ವಿಧಾನಸಭೆಯಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಉತ್ತರ ನೀಡುವ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲವಾದರೆ ಉಪಮುಖ್ಯಮಂತ್ರಿಗಳು ಹೋಗಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: Video | RCB ನಮ್ಮ ಟೀಮೇ ಅಲ್ಲ, ಅವ್ರು ಕರ್ನಾಟಕದವ್ರೇ ಅಲ್ಲ, ಕಾರ್ಯಕ್ರಮಕ್ಕೆ ಬರಲ್ಲ ಅಂದಿದ್ದೆ: ಸಿಎಂ

ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿ, ನನ್ನನ್ನು ಪದೇ ಪದೇ ನೆನೆಯದಿದ್ದರೆ ನಿಮಗೆ ಸಮಾಧಾನ ಆಗುವುದಿಲ್ಲ, ನಿಮ್ಮ ಪಕ್ಷದವರಿಗೆ ಖುಷಿ ಪಡಿಸಲೂ ಆಗುವುದಿಲ್ಲ. ನಿಮಗೆ ಖುಷಿ ಆಗುವಂತೆ ಉತ್ತರ ಕೊಡಲೂ ಆಗುವುದಿಲ್ಲ ಎಂದು ಛೇಡಿಸಿದರು.

ಆರ್‌ಸಿಬಿ ವಿಜಯೋತ್ಸವದಂದ ವಿಧಾನಸೌಧದ ಎದುರು ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ಕೆಎಸ್‌ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗದೇ ಹತಾಶರಾಗಿದ್ದರು. ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸುವಂತೆ ನೀವೇ ಬಂದು ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಆಯುಕ್ತರು ನನ್ನ ಬಳಿ ಮನವಿ ಮಾಡಿದರು. ನಾನು ಕಾರ್ಯಕ್ರಮಕ್ಕೆ ಹೋಗಿದ್ದೂ ನಿಜ, ಅಲ್ಲಿ ಇದ್ದಿದ್ದೂ ನಿಜ, ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದು ನಿಜ. 10 ನಿಮಿಷಗಳಲ್ಲಿ ಈ ಕಾರ್ಯಕ್ರಮ ಮುಗಿಸುವಂತೆ ಅವರಿಗೆ ಸೂಚನೆ ಕೊಟ್ಟಿದ್ದೂ ನಿಜ. ಇದೇ ಮಾತನ್ನು ನಾನು ನ್ಯಾ.ಕುನ್ಹಾ ಅವರ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದೂ ನಿಜ. ನಾನು ಅಲ್ಲಿಗೆ ಹೋಗಿಲ್ಲ ಎಂದು ಹೇಳುತ್ತಿಲ್ಲ. ಅಲ್ಲಿಗೆ ಹೋಗಲು ನಿಮ್ಮ ಅನುಮತಿಯ ಅಗತ್ಯವೂ ನನಗಿಲ್ಲ. ಪೊಲೀಸರ ಮನವಿ ಮೇಲೆ ನನ್ನ ಜವಾಬ್ದಾರಿಯಿಂದ ನಾನು ಹೋಗಿ ಅವರಿಗೆ ಸೂಚನೆ ನೀಡಿದ್ದೇನೆ. ಕಪ್‌ಗೆ ಮುತ್ತು ನೀಡಿದ್ದೇನೆ, ಆಟಗಾರರಿಗೆ ಅಭಿನಂದಿಸಿದ್ದೇನೆ ಎಂದರು.ಇದನ್ನೂ ಓದಿ: ಸುದೀಪ್ ಕನಸಿನ ವಿಷ್ಣು ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

Share This Article