ಬೆಂಗಳೂರು: ಚನ್ನಪಟ್ಟಣ ಕನಕಪುರದಿಂದ ರೌಡಿಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಇವತ್ತು ಬದುಕಿದ್ದೇನೆ ಅಂದರೆ ಪೊಲೀಸರೇ ಕಾರಣ ಎಂದು ಹೇಳಿ ಡಿಸಿಎಂ ಡಿಕೆಶಿವಕುಮಾರ್ (DK Shivakumar) ವಿರುದ್ಧ ಆರ್‌ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ (Munirathna) ಆಕ್ರೋಶ ಹೊರಹಾಕಿದ್ದಾರೆ.
ಮತ್ತಿಕೆರೆ ಜೆಪಿ ಪಾರ್ಕ್‌ನಲ್ಲಿ (JP Park) ಡಿಕೆಶಿ ಭಾಗವಹಿಸಿದ್ದ ಬೆಂಗಳೂರು ನಡಿಗೆ ಕಾರ್ಯಕ್ರಮದಿಂದ ಹೊರಬಂದು ಮಾತನಾಡಿದ ಅವರು, ರೌಡಿಶೀಟರ್‌ಗಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದಾರೆ. ಅವರ ತಮ್ಮ ಸೋತಾಗಿನಿಂದ ನಾನು ಟಾರ್ಗೆಟ್ ಆಗಿದ್ದೇನೆ. ರೌಡಿಶೀಟರ್‌ಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ನನಗೆ ಆಹ್ವಾನ ಬಂದಿಲ್ಲ ಎಂದು ಮೂರು ದಿನ ಹಿಂದೆ ನಾನು ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಸುದ್ದಿಗೋಷ್ಠಿ ಬಳಿಕವಾದರೂ ಸಂಸದರಿಗೆ, ಶಾಸಕರಿಗೆ ಆಹ್ವಾನ ಮಾಡಬೇಕಿತ್ತು. ಆಹ್ವಾನ ನೀಡದ್ದಕ್ಕೆ ನಾನು ಪ್ರಶ್ನೆ ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮ ಆಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರ ಫೋಟೋ ಹಾಕಬೇಕು. ಆದರೆ ಎಲ್ಲಿಯೂ ಫೋಟೋ ಹಾಕಿಲ್ಲ. ಇದು ಕಾಂಗ್ರೆಸ್ ಕಾರ್ಯಕ್ರಮವೇ ಅಥವಾ ಸರ್ಕಾರಿ ಕಾರ್ಯಕ್ರಮವೇ? ಇದನ್ನು ಪ್ರಶ್ನೆ ಮಾಡಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದರು. ಇದನ್ನೂ ಓದಿ: ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ – ಆಹ್ವಾನ ನೀಡದ್ದಕ್ಕೆ ಮುನಿರತ್ನ ಆಕ್ರೋಶ
ಇವತ್ತು ಆರ್‌ಎಸ್‌ಎಸ್ (RSS) ಸ್ಥಾಪನೆಯಾಗಿ ನೂರು ವರ್ಷ ಆಗಿದ್ದಕ್ಕೆ ನಾನು ಪಥಸಂಚಲನದಲ್ಲಿ ಭಾಗಿಯಾಗಿ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದೆ. ಈ ಕ್ಷೇತ್ರದ ಪ್ರಜೆಯಾಗಿ ಜನರ ಮಧ್ಯೆ ಕುಳಿತಿದ್ದರೆ, ಏಯ್ ಕರಿ ಟೋಪಿ ಎಂಎಲ್‌ಎ ಇಲ್ಲಿ ಬಾರಪ್ಪ ಎಂದು ಕರೆದು ಆರ್‌ಎಸ್‌ಎಸ್ ಬಟ್ಟೆಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ಹಾಕಿದರು.
ಇತಂಹ ರಾಜಕೀಯ ವ್ಯಕ್ತಿ ಮತ್ತೆ ಬರುವುದು ಬೇಡ ಎಂದು ದೇವರಲ್ಲಿ ಬೇಡಕೋಬೇಕು. ಎಷ್ಟೋ ಜನರ ಮನೆಗಳನ್ನು ಇವರು ಹಾಳು ಮಾಡಿದ್ದಾರೆ ಎಂದು ಡಿಕೆಶಿ ವಿರುದ್ಧ ಆರೋಪ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಬಳಿಕ ಮುನಿರತ್ನ ಅವರು ಜೆಪಿ ಪಾರ್ಕ್ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.