ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂದ್ರೆ ಸಪೋರ್ಟ್ ಮಾಡ್ತೀನಿ: ಜನಾರ್ದನ ರೆಡ್ಡಿ

Public TV
2 Min Read

ರಾಯಚೂರು: ಕೆ.ಆರ್.ಪಿ (KRP) ಪಕ್ಷದ ಪ್ರಣಾಳಿಕೆಯ ಭರವಸೆಗಳನ್ನ ಒಪ್ಪಿದರೆ ಹಾಗೂ ನನ್ನ ಜೊತೆ ಭರವಸೆ ಪೂರೈಸುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದರೆ, ಅವರು ಮುಖ್ಯಮಂತ್ರಿಯಾಗ್ತಾರೆ ಅಂದ್ರೆ ಅವರಿಗೆ ನಾನು ಸಪೋರ್ಟ್ ಮಾಡ್ತೀನಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಕಡೆ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ವಾಲಿದ್ದಾರೆ.

ರಾಯಚೂರಿನ ಲಿಂಗಸುಗೂರಿನಲ್ಲಿ ಕೆಆರ್‍ ಪಿ ಪಕ್ಷದ ಅಭ್ಯರ್ಥಿ ಆರ್.ರುದ್ರಯ್ಯ ಪರ ಪ್ರಚಾರ ವೇಳೆ ಭಾಷಣ ಮಾಡಿದ ಅವರು. ಇಂದು ನನಗೆ ಯಾರೂ ಶತ್ರುಗಳಿಲ್ಲ, ಮಿತ್ರರಿಲ್ಲ ಎಂದರು. ಇದೇ ವೇಳೆ ಬಿಜೆಪಿ (BJP) ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಾಯಕರಿಂದಲೇ ದೇಶದ ರಕ್ಷಣೆಯಾಗುತ್ತೆ ಅನ್ನೋ ರೀತಿ ಮಾತನಾಡುತ್ತಾರೆ. ಬಿಜೆಪಿ ದೊಡ್ಡದೊಡ್ಡ ನಾಯಕರು ದೆಹಲಿಯಿಂದ ಬಂದು ಮಾತನಾಡುತ್ತಿದ್ದಾರೆ. ರಾಜ್ಯಕ್ಕೆ ಡಬಲ್ ಇಂಜಿನ್ ಸರ್ಕಾರ ಬೇಕು ಅಂತ ಹೇಳುತ್ತಿದ್ದಾರೆ. ಅವರಿಗೇನಾದ್ರೂ ಮಾನ, ಮರ್ಯಾದೆ, ನಾಚಿಕೆ ಅನ್ನೋದು ಇದ್ರೆ ಹೇಳಲಿ ಎಂದರು.

ರಾಜ್ಯದಲ್ಲಿ, ಕೇಂದ್ರದಲ್ಲಿ ಇದ್ದದ್ದು ಬಿಜೆಪಿ ಸರ್ಕಾರವೇ, ಆದ್ರೂ ಏನ್ ಮಾಡಿದ್ದೀರಿ ನೀವು. ಒಳ್ಳೊಳ್ಳೆ ನಾಯಕರನ್ನ ಮನೆಯಲ್ಲಿ ಕೂಡಿಸಿದ್ದೀರಿ. ಯಡಿಯೂರಪ್ಪ (BS Yediyurappa) ನವರಿಗೆ ಜನ ಚಪ್ಪಾಳೆ ಹೊಡೀತಾರೆ ಅಂತ ವಯಸ್ಸಾಗಿದೆ ಅಂದ್ರಿ. ಯಡಿಯೂರಪ್ಪ, ಅಡ್ವಾಣಿನ ಮೂಲೆಗುಂಪು ಮಾಡಿದ್ರಿ. ಇವತ್ತು ಕೇವಲ ಡಮ್ಮಿಗಳು, ಕೂಡು ಅಂದ್ರೆ ಕೂಡುವ ಏಳು ಅಂದ್ರೆ ಏಳುವ ಸಿಎಂ ಗಳನ್ನ ಇಟ್ಟುಕೊಂಡು ದೇಶ ಆಳಲು ಬಿಜೆಪಿ ಹೊರಟಿದೆ. ಯಾವುದೇ ಕಾರಣಕ್ಕೂ ನಿಮ್ಮ ಆಟ ನಡೆಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: BJP ಬಂದ್ಮೇಲೆ 1 GB ಡೇಟಾ 10 ರೂ.ಗೆ ಸಿಕ್ತಿದೆ, ನಿಮ್ಮ 4 ಸಾವಿರ ಉಳಿತಾಯ ಮಾಡ್ತಿದೆ – ಮೋದಿ

ಯಾವುದೇ ಅಭಿವೃದ್ಧಿಯನ್ನ ಮಾಡಿಲ್ಲ ಬರೀ ಸುಳ್ಳು, ಮೋಸ, ಬರೀ ಕುತಂತ್ರಿಗಳು. ಕುತಂತ್ರಿಗಳಿಂದಲೇ ಬಿಜೆಪಿ ರಾಜಕೀಯ ಬಂದಿದೆ. ಇಡೀ ರಾಜ್ಯವನ್ನ ಬಿಜೆಪಿ ಸರ್ವ ನಾಶ ಮಾಡಿಬಿಟ್ಟಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಂದೂ ಒಳ್ಳೆಯ ಕೆಲಸ ಮಾಡಿಲ್ಲ. ಬಿಜೆಪಿ ಇನ್ನೂ ಮೂರು ದಿನದಲ್ಲಿ ಖಾಲಿಯಾಗುತ್ತೆ. ದೊಡ್ಡ ದೊಡ್ಡ ಕನಸುಗಳನ್ನ ತೋರಿಸಿ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳಿ. ಹಿಂದುತ್ವದ ಆಧಾರದ ಮೇಲೆ ಮತಗಳನ್ನ ಕೇಳಿ. ಸಮಾಜವನ್ನ ಒಡೆದು ಆಳಲು ಬಿಜೆಪಿ ದೇಶದಲ್ಲಿದೆ. ಹಿಂದೂ ಮುಸ್ಲಿಂ ಭಾಯಿ ಭಾಯಿ ಭಾರತಮಾತೆ ನಮ್ಮ ತಾಯಿ ಅನ್ನೋ ಸಂದೇಶದಲ್ಲಿ ಕೆಆರ್‍ಪಿ ಪಕ್ಷ ಕಟ್ಟಿದ್ದೇನೆ ಎಂದು ವಿವರಿಸಿದರು.

ಇವತ್ತಿನ ಬಿಜೆಪಿಗೆ ತತ್ವ ಸಿದ್ಧಾಂತ ಯಾವುದು ಇಲ್ಲಾ, ಎಲ್ಲಾ ಮಣ್ಣು ಪಾಲಾಗಿದೆ. ಬಿಜೆಪಿಯಲ್ಲಿ ಇವತ್ತು ಎಲ್ಲವೂ ವ್ಯಾಪಾರ ಆಗಿಬಿಟ್ಟಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ಯಡಿಯೂರಪ್ಪರನ್ನ ಸಿಎಂ ಮಾಡಲು ಶ್ರಮಿಸಿದ್ದೇವೆ. ವಾಜಪೇಯಿ, ಅಡ್ವಾಣಿ, ಸುಷ್ಮಾಸ್ವರಾಜ್ ನಮ್ಮನ್ನ ಮಕ್ಕಳ ರೀತಿ ನೋಡುತ್ತಿದ್ದರು ಎಂದು ತಿಳಿಸಿದರು.

ಲಿಂಗಸುಗೂರಲ್ಲಿ ರುದ್ರಯ್ಯ ಕಾಂಗ್ರೆಸ್ (Congress) ಅಭ್ಯರ್ಥಿಯಾಗ್ತಾರೆ, ಅವರಿಗೆ ಟಿಕೆಟ್ ಸಿಗುತ್ತೆ ಅಂತ ಇತ್ತು. ಕಾಂಗ್ರೆಸ್ ನಾಯಕರು ಅವರಿಗೆ, ಬಿಜೆಪಿ ನಾಯಕರು ನನಗೆ ಯಾಕೆ ಮೋಸ ಮಾಡಿದ್ರೊ ಗೊತ್ತಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ 90% ಕಾರ್ಯಕರ್ತರು ಖಾಲಿಯಾಗಿ ರುದ್ರಯ್ಯ ಹಿಂದೆ ಬಂದಿದ್ದಾರೆ ಎಂದು ಹೇಳಿದರು.

Share This Article