ನಾನು 1980 ರಲ್ಲೇ ಸಿಎಂ ಆಗಬೇಕಿತ್ತು, ಸಿಗದ್ದಕ್ಕೆ ನಾನು ಪಶ್ಚಾತ್ತಾಪ ಪಡಲಿಲ್ಲ: ಮೊಯ್ಲಿ

Public TV
2 Min Read

ಬಾಗಲಕೋಟೆ: ನಮಗೆ ಅರ್ಹತೆ ಇದ್ದರೆ, ಸರದಿ ಬಂದರೆ ಮುಖ್ಯಮಂತ್ರಿ (Chief Minister) ಆಗುತ್ತೇವೆ. ನಾನು 1980 ರಲ್ಲೇ ಸಿಎಂ ಆಗಬೇಕಿತ್ತು. ಆದರೆ ಸಮಯದಲ್ಲಿ ಸಿಎಂ ಸ್ಥಾನ ಸಿಗಲಿಲ್ಲ. ನಾನು ಸಿಎಂ ಆಗಲು 10 ವರ್ಷ ಕಾದಿದ್ದೆ ಎಂದು ವೀರಪ್ಪ ಮೊಯ್ಲಿ (Veerappa Moily) ಹೇಳಿದ್ದಾರೆ.

ಪಕ್ಷವನ್ನು ಅಧಿಕಾರಕ್ಕೆ ತಂದರೂ ಸಿಎಂ ಅವಕಾಶ ಕೈತಪ್ಪಿತು ಎಂಬ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 1979 ರಿಂದ 1995 ರವರೆಗೆ ನಾನೇ ಪಕ್ಷದ ಸಂಘಟನೆ ಮಾಡಿದ್ದೆ. ಆದರೆ ಆಗ ನನ್ನ ಬದಲು ಆರ್ ಗುಂಡೂರಾವ್ ಸಿಎಂ ಆದರು, ನಂತರ ಬಂಗಾರಪ್ಪ ಸಿಎಂ ಆದರು. ಅದಕ್ಕಿಂತ ಮೊದಲು ವೀರೇಂದ್ರ ಪಾಟಿಲ್ ಸಿಎಂ ಆದರು. ಹಾಗಂತ ನನಗೆ ಸಿಗಲಿಲ್ಲ ಎಂದು ನಾನು ಪಶ್ಚಾತ್ತಾಪ ಪಡಲಿಲ್ಲ ಎಂದು ಹೇಳಿದರು.

ನನ್ನಿಂದಲೇ ಪಕ್ಷದ ಅಧಿಕಾರಕ್ಕೆ ಬಂತು ಎಂದು ಹೇಳಲು ಆಗುವುದಿಲ್ಲ. ಎಷ್ಟು ವರ್ಷ ಸಿಎಂ ಆಗಿದ್ದೇವೆ ಎನ್ನುವುದು ಮುಖ್ಯವಲ್ಲ, ಏನು ಕೆಲಸ ಮಾಡಿದ್ದೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ: ಕಷ್ಟ ಪಟ್ಟಿದ್ದು ನಾನು, ಕೃಷ್ಣ ಸಿಎಂ ಆದ್ರು – ಮುಖ್ಯಮಂತ್ರಿ ಸ್ಥಾನ ಸಿಗದಿದ್ದಕ್ಕೆ ಖರ್ಗೆ ಬಹಿರಂಗ ಬೇಸರ

 

ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸುವುದು, ಪೈಪೋಟಿ ಇರುವುದು ಸಾಮಾನ್ಯ. ಕೆಲವರಿಗೆ ಸಿಗುತ್ತದೆ ಕೆಲವರಿಗೆ ಸಿಗುವುದಿಲ್ಲ. ಸಾಯುವವರೆಗೂ ಕೆಲವರಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ಸಿಗುವುದಿಲ್ಲ. ಆದರೆ ಆಧಿಕಾರವನ್ನು ವಾಮಮಾರ್ಗದ ಮೂಲಕ ಸಾಧಿಸಬಾರದು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.

ಈಗ ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷ ಆಡಳಿತ ಮಾಡುತ್ತೇನೆ ಎನ್ನುತ್ತಾರೆ. ಅವರಿಗೆ ಆ ಆಸೆ ಇದೆ, ಅದರೆ ಬಗ್ಗೆ ತಪ್ಪು ತಿಳಿದುಕೊಳ್ಳಲು ಆಗುವುದಿಲ್ಲ. ಡಿಸಿಎಂ ಆದವರು ಸಿಎಂ ಆಗಬೇಕು ಅಂತ ಆಸೆ ಪಡ್ತಾರೆ. ಆದರೆ ಕೆಲವೊಂದು ಸಾರಿ ಡೆಪ್ಯುಟಿ ಸಿಎಂ ಆದವರು ಡಿಸಿಎಂ ಆಗಿಯೇ ನಿವೃತ್ತಿಯಾಗಬಹುದು. ನನಗೆ ಸಿಗಲಿಲ್ಲ ಅಂತ ಪಶ್ಚಾತ್ತಾಪ ಪಡುವುದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗೋ ಅರ್ಹತೆ ಇತ್ತು: ಆರ್.ವಿ.ದೇಶಪಾಂಡೆ

ಗ್ಯಾರಂಟಿಯಿಂದ ಸರಕಾರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಲಂಚ ನಿಂತರೆ ಎಲ್ಲದಕ್ಕೂ ಹಣವಿದೆ. ಸಂಪನ್ಮೂಲ ಕ್ರೋಢಿಕರಣ, ವ್ಯಾಟ್ ಇರಬಹುದು, ಜಿಎಸ್‌ಟಿ ಇರಬಹುದು. ಅದೆಲ್ಲವನ್ನು ಸರಿಯಾಗಿ ವಸೂಲಿ ಮಾಡಿದರೆ ಎಲ್ಲದಕ್ಕೂ ಹಣ ಇದೆ. ಹಣವಿಲ್ಲ ಅಂತೇನಿಲ್ಲ ನಾನು ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸರಿಯಾಗಿ ಆಡಳಿತ ಮಾಡಿದರೆ ಎಲ್ಲದಕ್ಕೂ ಹಣ ಇದೆ. ಖರ್ಚು ಮಾಡುವವರಿಗೆ ಹಣವಿದೆ. ಖರ್ಚು ಮಾಡದವರಿಗೆ ಹಣವಿಲ್ಲ ಎಂದರು.

 

Share This Article