ನಾನು ಬೌದ್ಧಧರ್ಮ ಪಾಲಿಸುತ್ತೇನೆ, ನಾನೊಬ್ಬ ಜಾತ್ಯತೀತವಾದಿ: ಸಿಜೆಐ ಗವಾಯಿ ವಿದಾಯ ಭಾಷಣ

1 Min Read

ನವದೆಹಲಿ: ನಾನೊಬ್ಬ ಜಾತ್ಯತೀತವಾದಿ, ಬೌದ್ಧಧರ್ಮವನ್ನು ಅನುಸರಿಸುತ್ತೇನೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ (B.R.Gavai) ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಕೋರ್ಟ್ ನಂ. 1 ರಲ್ಲಿ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ಸ್ ಅಸೋಸಿಯೇಷನ್ ​​(SCAORA)ನಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ನವೆಂಬರ್ 20ರ ತಮ್ಮ ಕೊನೆಯ ಕೆಲಸದ ದಿನಕ್ಕೂ ಮುನ್ನ ಸಿಜೆಐ ಗವಾಯಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಸಿಜೆಐ ಗವಾಯಿ ಅವರು ಅಧಿಕೃತವಾಗಿ ನವೆಂಬರ್ 23 ರಂದು ನಿವೃತ್ತಿ ಹೊಂದಲಿದ್ದಾರೆ.

ವಿದಾಯ ಭಾಷಣದಲ್ಲಿ ಮಾತನಾಡಿದ ಅವರು, ನಾನು ಬೌದ್ಧಧರ್ಮವನ್ನು ತಮ್ಮ ಪಾಲಿಸುತ್ತಿದ್ದರೂ, ಹಿಂದೂ ಧರ್ಮ, ಸಿಖ್ ಧರ್ಮ, ಇಸ್ಲಾಂ ಮತ್ತು ಇತರ ಧರ್ಮಗಳನ್ನು ಒಳಗೊಂಡಂತೆ ಪ್ರತಿಯೊಂದು ಧರ್ಮವನ್ನು ನಂಬುವ ನಿಜವಾದ ಜಾತ್ಯತೀತ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.

ನನ್ನ ತಂದೆಯಿಂದ ಜಾತ್ಯತೀತನಾಗಿರುವುದನ್ನು ಕಲಿತಿದ್ದೇನೆ. ಅವರು ನಿಜವಾದ ಜಾತ್ಯತೀತರೂ ಮತ್ತು ಡಾ. ಭೀಮರಾವ್ ಅಂಬೇಡ್ಕರ್ ಅವರ ಪಾಂಡಿತ್ಯಪೂರ್ಣ ಅನುಯಾಯಿಯೂ ಆಗಿದ್ದರು ಎಂದು ಹೇಳಿದ್ದಾರೆ.

ದೇಶದ ನ್ಯಾಯಾಂಗ ಸಂಸ್ಥೆಗೆ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಪುರಸಭೆಯ ಶಾಲೆಯಲ್ಲಿ ಓದುವುದರಿಂದ ಹಿಡಿದು ದೇಶದ ಅತ್ಯುನ್ನತ ನ್ಯಾಯಾಂಗ ಕಚೇರಿಯನ್ನು ನಾನು ತಲುಪಲು ಭಾರತದ ಸಂವಿಧಾನ ಮತ್ತು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳಿಂದ ಸಾಧ್ಯವಾಯಿತು ಎಂದು ಸಿಜೆಐ ಮಾತನಾಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಸುಪ್ರೀಂ ಮುಖ್ಯ ನ್ಯಾಯಮೂರ್ತಿಯಾಗಿ ಆರು ತಿಂಗಳು ಸೇವೆ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆರೂವರೆ ವರ್ಷಗಳು ಕರ್ತವ್ಯ ನಿರ್ವಹಿಸಿದ್ದಾರೆ.

Share This Article