ನನಗೆ ನ್ಯಾಯ ಬೇಕು – ಪಾಕ್‌ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ

Public TV
2 Min Read

ಶ್ರೀನಗರ: ಪಾಕಿಸ್ತಾನದ (Pakistan) ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಕೆಲಸ ಕಳೆದುಕೊಂಡಿದ್ದ ಸಿಆರ್‌ಪಿಎಫ್‌ (CRPF) ಯೋಧ, ನ್ಯಾಯಕ್ಕಾಗಿ ಪ್ರಧಾನಿ ಮೋದಿಯವರ (Narendra Modi) ಮೊರೆ ಹೋಗಿದ್ದಾರೆ.

41ನೇ ಬೆಟಾಲಿಯನ್‍ನಲ್ಲಿ ಸಿಆರ್‌ಪಿಎಫ್ ಯೋಧರಾಗಿದ್ದ ಮುನೀರ್ ಅಹಮದ್ ಪಾಕಿಸ್ತಾನದ ಯುವತಿ ಮೆನಾಲ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು. ಆಕೆಯ ಜೊತೆ ವಿವಾಹಕ್ಕೆ ಸಿಆರ್‌ಪಿಎಫ್ ಬಳಿ ಅನುಮತಿಯನ್ನು ಕೋರಿದ್ದರು. ಅವರಿಗೆ ಅನುಮತಿ ನೀಡುವ ಮುನ್ನವೇ ಮುನೀರ್ ಅವರು ವಿವಾಹವಾಗಿದ್ದರು. ಇದರಿಂದ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇನ್ನೂ ಮುನೀರ್ ಅಹ್ಮದ್ ಅವರ ಪತ್ನಿ ಮೆನಾಲ್ ಖಾನ್ ಅವರನ್ನು ಗಡೀಪಾರು ಮಾಡುವ ಹಂತದಲ್ಲಿದ್ದರು, ಕೊನೆ ಕ್ಷಣದಲ್ಲಿ ನ್ಯಾಯಾಲಯದಿಂದ ಗಡೀಪಾರಿಗೆ ತಡೆ ತರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುನೀರ್‌, ವೀಸಾ ಅವಧಿ ಮುಗಿದ ನಂತರವೂ ತನ್ನ ಪತ್ನಿ ಭಾರತದಲ್ಲಿ ಉಳಿದುಕೊಂಡಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ವಜಾ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಈ ಬಗ್ಗೆ ನಾನು ಮಾಹಿತಿ ನೀಡಿದ್ದೇನೆ, ನನ್ನ ಬಳಿ ಪುರಾವೆಗಳಿವೆ. ನಾನು ಸರಿಯಾದ ದಾಖಲೆಗಳನ್ನು ಒದಗಿಸಿದ್ದೇನೆ ಎಂದಿದ್ದಾರೆ.

ಮುನೀರ್ ಅಹ್ಮದ್ ಅವರು ಪಾಕ್‌ನ ಯುವತಿ ಮೆನಾಲ್ ಖಾನ್ ಅವರನ್ನು ಕಳೆದ ವರ್ಷ ಮೇ 24 ರಂದು ವೀಡಿಯೊ ಕರೆಯಲ್ಲಿ ವಿವಾಹವಾಗಿದ್ದರು. ಅಕ್ಟೋಬರ್‌ನಲ್ಲಿ ಮದುವೆಯ ಬಗ್ಗೆ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಮೆನಾಲ್ ಖಾನ್ ಫೆಬ್ರವರಿಯಲ್ಲಿ ವಾಘಾ-ಅಟ್ಟಾರಿ ಗಡಿಯ ಮೂಲಕ ಭಾರತಕ್ಕೆ ಬಂದು ಮುನೀರ್ ಅಹ್ಮದ್ ಜೊತೆ ವಾಸವಾಗಿದ್ದರು. ಅವರ 15 ದಿನಗಳ ವೀಸಾ ಮಾರ್ಚ್‌ನಲ್ಲಿ ಮುಕ್ತಾಯಗೊಂಡಿತ್ತು. ನಂತರ ಮುನೀರ್ ದೀರ್ಘಾವಧಿಯ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿಯಾಗಿತ್ತು. ಇದರಿಂದ ಕೇಂದ್ರ ಸರ್ಕಾರ ಪಾಕ್‌ ಪ್ರಜೆಗಳನ್ನು ದೇಶ ತೊರೆಯುವಂತೆ ಆದೇಶಿಸಿತ್ತು. ಇನ್ನೂ ಮೆನಾಲ್ ಖಾನ್ ಅಹ ಗಡೀಪಾರಾಗುವ ಹಂತದಲ್ಲಿದ್ದರು. ಅಷ್ಟರಲ್ಲೇ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಅವರ ಗಡೀಪಾರಿಗೆ ತಡೆ ನೀಡಿತ್ತು.

ಫೆಬ್ರವರಿಯಲ್ಲಿ ಪತ್ನಿ ಬಂದ ನಂತರ ನಾನು ರಜೆಯಲ್ಲಿದ್ದೆ. ಮಾರ್ಚ್ 23 ರಂದು ಮತ್ತೆ ಕರ್ತವ್ಯಕ್ಕೆ ಸೇರಿಕೊಂಡೆ. ಅಧಿಕಾರಿಗಳಿಗೆ ಈ ವೇಳೆ ಎಲ್ಲಾ ಮಾಹಿತಿ ತಿಳಿಸಿದೆ. ನಾನು ಅವರ ವೀಸಾದ ಪ್ರತಿಯನ್ನು ನೀಡಿ ದೀರ್ಘಾವಧಿಯ ವೀಸಾ ಅರ್ಜಿಯ ಬಗ್ಗೆಯೂ ಹೇಳಿದೆ. ನಂತರ ಇದ್ದಕ್ಕಿದ್ದಂತೆ, ನನ್ನನ್ನು (ಭೋಪಾಲ್‌ಗೆ) ವರ್ಗಾಯಿಸಲಾಯಿತು. ನಾನು 2027 ರಲ್ಲಿ ಜಮ್ಮು ಮತ್ತು ಕಾಶ್ಮೀರದ ನನ್ನ ನಿಯೋಜನೆ ಪೂರ್ಣಗೊಳಿಸಬೇಕಾಗಿತ್ತು. ಬೇರೆ ಬೆಟಾಲಿಯನ್‌ಗೆ ವರ್ಗಾಯಿಸಿದಾಗಲೆಲ್ಲಾ, 15 ದಿನಗಳ ಸೇರ್ಪಡೆ ಸಮಯ ಸಿಗುತ್ತದೆ. ನನಗೆ ಅದು ಸಿಗಲಿಲ್ಲ. ನನಗೆ ರೈಲು ಟಿಕೆಟ್ ಕೂಡ ನೀಡಲಾಗಿಲ್ಲ. ನಾನು 41ನೇ ಬೆಟಾಲಿಯನ್‌ಗೆ ಸೇರಿದೆ. ಸಂದರ್ಶನದ ವೇಳೆ ಮದುವೆಯ ಬಗ್ಗೆ ಎಲ್ಲವನ್ನೂ ಹೇಳಿದೆ. ನನ್ನ ವರ್ಗಾವಣೆಯ ಬಗ್ಗೆ ನಾನು ಮಹಾನಿರ್ದೇಶಕರಿಗೆ ಸಹ ಪತ್ರ ಬರೆದಿದ್ದೇನೆ. ಆ ಅರ್ಜಿ ಪ್ರಕ್ರಿಯೆಯಲ್ಲಿದೆ ಎಂದು ಮುನೀರ್‌ ಹೇಳಿಕೊಂಡಿದ್ದಾರೆ.

ಸೇವೆಯಿಂದ ವಜಾಗೊಳಿಸಿದ್ದರಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಒಬ್ಬ ಜವಾನನಾಗಿ ನನಗೆ ನ್ಯಾಯ ಸಿಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಲು ಬಯಸುತ್ತೇನೆ. ನಾನು 2024 ರಲ್ಲಿ ವಿವಾಹವಾದೆ ಮತ್ತು 2022 ರಿಂದ ಇಲಾಖೆಗೆ ಎಲ್ಲಾ ಮಾಹಿತಿ ನೀಡುತ್ತಿದ್ದೇನೆ. ಇದರಲ್ಲಿ ಅಕ್ರಮ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

Share This Article