ಕೇರಳದಲ್ಲಿ ಶತ್ರು ಸಂಹಾರ ಯಾಗ ನಡೆದಿಲ್ಲ – ದೇವಸ್ಥಾನದ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಡಿಕೆಶಿ

Public TV
2 Min Read

ಬೆಂಗಳೂರು: ನನ್ನ ಹೇಳಿಕೆಯನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದು, ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ (Taliparamba Rajarajeswara Temple) 15 ಕಿ.ಮೀ. ದೂರದಲ್ಲಿರುವ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಸ್ಪಷ್ಟಪಡಿಸಿದ್ದಾರೆ.

ನಾನು ರಾಜರಾಜೇಶ್ವರನ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡುವುದಿಲ್ಲ ಎನ್ನುವ ಅರಿವಿದೆ. ಯಾಗ ನಡೆದಿರುವ ಸ್ಥಳದ ಬಗ್ಗೆ ಮಾಹಿತಿ ನೀಡಲಷ್ಟೇ ನಾನು ದೇಗುಲದ ಹೆಸರನ್ನು ಉಲ್ಲೇಖಿಸಿದ್ದೆ. ಕೆಲವು ದಿನಗಳ ಹಿಂದೆ ದೇವಸ್ಥಾನಕ್ಕೆ ‌ಭೇಟಿ‌ ನೀಡಿ ಆಶೀರ್ವಾದ ಪಡೆದಿದ್ದೆ. ವಿಷಯಗಳನ್ನು ಸಂದರ್ಭದಿಂದ ಹೊರಗಿಟ್ಟು ಅವುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂಬುದು ನನ್ನ ವಿನಂತಿ ಎಂದು ಡಿಕೆಶಿ ಹೇಳಿದ್ದಾರೆ.


ಕಣ್ಣೂರು ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಸಮೀಪದಲ್ಲಿ ಪ್ರಾಣಿಬಲಿ ನೀಡಿ ಶತ್ರು ಭೈರವಿ ಯಾಗ ಮಾಡಲಾಗಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಯನ್ನು ಇಂದು ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿತ್ತು. ಇದನ್ನೂ ಓದಿ: ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಬಳಿ ಶತ್ರು ಭೈರವಿ ಯಾಗ ನಡೆದಿಲ್ಲ – ಡಿಕೆಶಿ ಆರೋಪ ಸುಳ್ಳು ಎಂದ ಆಡಳಿತ ಮಂಡಳಿ

ದೇವಸ್ವಂ ಟ್ರಸ್ಟಿ ಮಂಡಳಿ ಸದಸ್ಯ ಮಾಧವನ್ ಪ್ರತಿಕ್ರಿಯಿಸಿ, ಯಾವುದೇ ದೇವಾಲಯವನ್ನು ಕೊಲ್ಲುವ ಶತ್ರು-ಸಂಹಾರ ಪೂಜೆ ಅಥವಾ ಪ್ರಾಣಿ ಬಲಿ ದೇವಾಲಯದಲ್ಲಿ ಅಥವಾ ದೇವಾಲಯದ ಸುತ್ತಲೂ ನಡೆದಿರುವುದು ತಿಳಿದಿಲ್ಲ. ಅವರು ಹೇಳಿದಂತೆ ಮೇಕೆ, ಎಮ್ಮೆಗಳನ್ನು ಕಡಿಯಲಾಗಿದೆ ಎಂಬ ಹೇಳಿಕೆ 100% ರಷ್ಟು ಸುಳ್ಳು ಎಂದು ಹೇಳಿದ್ದರು.

ತಳಿಪರಂಬ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಗೌಪ್ಯವಾಗಿ ನಡೆಯಲು ಸಾಧ್ಯವಿಲ್ಲ ಎಂದು ಟ್ರಸ್ಟಿ ಸದಸ್ಯರು ಹೇಳಿಕೆ ನೀಡಿದ್ದು, ದೇವಸ್ಥಾನದ ಆವರಣದಲ್ಲಿದೆ ಎಂದು ಹೇಳಿ ದೇವಸ್ಥಾನದ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ ಎಂದಿದ್ದಾರೆ.

 

Share This Article