ಮೈಕಲ್ ಬಂಧನದ ಬಿಸಿಗೆ ಎಚ್ಚೆತ್ತ ವಿಜಯ್ ಮಲ್ಯ!

Public TV
2 Min Read

ನವದೆಹಲಿ: ಯುಪಿಎ ಅವಧಿಯ ಹೆಲಿಕಾಪ್ಟರ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‍ನನ್ನು ಸಿಬಿಐ ಭಾರತಕ್ಕೆ ಕರೆತರುತ್ತಿದ್ದಂತೆ, ಸಾರ್ವಜನಿಕ ಬ್ಯಾಂಕ್‍ಗಳಿಗೆ ವಂಚಿಸಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಈಗ ಎಚ್ಚೆತ್ತುಕೊಂಡಿದ್ದಾರೆ.

ನಾನು ಪಡೆದಿರವುದು ಸಾರ್ವಜನಿಕ ಹಣ. ಹೀಗಾಗಿ ಶೇ.100ರಷ್ಟು ಸಾಲವನ್ನು ಮರು ಪಾವತಿ ಮಾಡುತ್ತೇನೆ ಎಂದು ವಿಜಯ್ ಮಲ್ಯ ಸರಣಿ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಇದೇ ವೇಳೆ ರಾಜಕಾರಣಿಗಳು ಹಾಗೂ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ನಾನು ಸಾರ್ವಜನಿಕರ ಹಣವನ್ನು ದೋಚಿ ಪರಾರಿಯಾಗಿದ್ದೇನೆ ಎಂದು ರಾಜಕಾರಣಿಗಳು ಹಾಗೂ ಮಾಧ್ಯಮಗಳು ನನ್ನ ವಿರುದ್ಧ ಜೋರಾಗಿ ಮಾತನಾಡುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣವಿರುವಾಗಲೇ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.

ಕಿಂಗ್‍ಫಿಶರ್ ಅದ್ಭುತ ವಿಮಾನಯಾನ ಸಂಸ್ಥೆಯಾಗಿದೆ. ಆದರೆ ವಿಮಾನಕ್ಕೆ ಬಳಸುವ ಇಂಧನದ ಬೆಲೆಯು ಪ್ರತಿ ಬ್ಯಾರೆಲ್‍ಗೆ 140 ಅಮೆರಿಕನ್ ಡಾಲರ್ ಹೆಚ್ಚಾಯಿತು. ಇದನ್ನು ಸಂಸ್ಥೆ ಎದುರಿಸುವಲ್ಲಿ ವಿಫಲವಾಯಿತು. ಇದರಿಂದಾಗಿ ಬ್ಯಾಂಕ್ ಹಣವೆಲ್ಲವೂ ಅಲ್ಲಿ ಹೋಗಿದೆ. ನಾನು ಶೇಕಡಾ 100ರಷ್ಟು ಹಣ ಮರು ಪಾವತಿ ಮಾಡಲು ಸಿದ್ಧವಾಗಿದ್ದೇನೆ. ದಯವಿಟ್ಟು ಸ್ವೀಕರಿಸಿ.

ಕಳೆದ ಮೂರು ದಶಕಗಳಿಂದ ಕಿಂಗ್‍ಫಿಶರ್ ಮದ್ಯದ ಕಂಪನಿ ಉತ್ತಮ ಪ್ರಗತಿಯಲ್ಲಿದೆ. ಆದರೆ ವಿಮಾನ ಯಾನದಿಂದ ನಷ್ಟಕ್ಕೆ ಒಳಗಾಗಬೇಕಾಯಿತು. ಅನೇಕ ರಾಜ್ಯಗಳ ಪ್ರಗತಿಗೆ ಹಣವನ್ನು ನೀಡಿರುವೆ. ಎಂದಿಗೂ ಬ್ಯಾಂಕ್‍ಗೆ ಮೋಸ ಮಾಡುವುದಿಲ್ಲ. ಎಲ್ಲ ಹಣವನ್ನು ಪಾವತಿ ಮಾಡುತ್ತೇನೆ.

ದೇಶ ತೊರೆದು ಬಂದಿರುವುದಕ್ಕೆ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ. ನಾನು ಜನರ ಹಣವನ್ನು ಮರುಪಾವತಿ ಮಾಡಲು ಯತ್ನಿಸುತ್ತಿರುವೆ. ದಯವಿಟ್ಟು ಅದನ್ನು ಸ್ವೀಕರಿಸಿ.

ಡಿಸೆಂಬರ್ 10ಕ್ಕೆ ತೀರ್ಪು:
ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಲಂಡನ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಡಿಸೆಂಬರ್ 10 ರಂದು ತೀರ್ಪು ಪ್ರಕಟವಾಗಲಿದೆ. ತೀರ್ಪು ಪ್ರಕಟವಾಗಲು 5 ದಿನ ಬಾಕಿ ಇರುವಾಗ ಮಲ್ಯ ತಾನು ಪಡೆದ ಎಲ್ಲ ಸಾಲವನ್ನು ಮರಳಿ ಪಾವತಿಸುತ್ತೇನೆ ಎಂದು ಅಚ್ಚರಿಯ ಎಂಬಂತೆ ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *