ನಾನು ಅರಣ್ಯ ಭೂಮಿ ಒತ್ತುವರಿ ಮಾಡಿಲ್ಲ: ದೂರಿನ ಬೆನ್ನಲ್ಲೇ ಸಚಿವ ಬೋಸರಾಜು ಸ್ಪಷ್ಟನೆ

Public TV
2 Min Read

ರಾಯಚೂರು: ನಾನು ಯಾವುದೇ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಲ್ಲ ಎಂದು ಸಣ್ಣನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು (NS Bosaraju) ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಪತ್ನಿ ಹೆಸರಿನಲ್ಲಿ ರಾಯಚೂರಿನಲ್ಲಿ (Raichuru) 5 ಎಕರೆ ಮೀಸಲು ರಕ್ಷಿತ ಅರಣ್ಯ ಪ್ರದೇಶ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲಹಳ್ಳಿ ಸೋಮವಾರ ರಾಜ್ಯಪಾಲರಿಗೆ ದೂರು ನೀಡಿದ್ದರು.ಇದನ್ನೂ ಓದಿ: ದರ್ಶನ್‌ಗೆ ಆಪರೇಷನ್‌ ಮಾಡಬೇಕಿದೆ, ಜಾಮೀನು ನೀಡಿ: ಹೈಕೋರ್ಟ್‌ನಲ್ಲಿ ವಕೀಲರ ಮನವಿ

ದೂರಿನಲ್ಲಿ ಏನಿದೆ?
ಬೋಸರಾಜು ಅಧಿಕಾರ ದುರ್ಬಳಕೆ ಮಾಡಿಕೊಂಡು ಪತ್ನಿ ಕೃಷ್ಣವೇಣಿ ಮೂಲಕ ಅರಣ್ಯ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಮೀಸಲು ಅರಣ್ಯ ಭೂಮಿ ವಶಕ್ಕೆ ಪಡೆದಿದ್ದಾರೆ. ಪತ್ನಿ ಸೇರಿ ನಾಲ್ಕು ಜನರಿಗೆ ಸಹಾಯ ಮಾಡಿ, ಒಟ್ಟು 16 ಎಕರೆ 21 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಲಾಗಿದೆ. ಸಿ.ಎಚ್.ಶ್ರೀನಿವಾಸ, ಕೃಷ್ಣವೇಣಿ, ಮುತ್ಯಾಲ ತಿರುಮಲ ರಾವ್, ವಿ.ಶಿವನಾಥ್ ವಿರುದ್ಧ 2022ರ ಆ.4 ರಂದು ರಾಯಚೂರು ಉಪವಲಯ ಅರಣ್ಯಾಧಿಕಾರಿಗಳಿಂದ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಕ್ರಮ ಜರುಗಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಭೂಕಬಳಿಕೆದಾರರೊಂದಿಗೆ ಶಾಮೀಲಾಗಿ ಅಕ್ರಮವಾಗಿ ಭೂಮಿ ಪಡೆದು ಲೇಔಟ್ ನಿರ್ಮಾಣ ಮಾಡಿದ್ದಾರೆ. ಸಚಿವರ ವಿರುದ್ಧ ಕ್ರಮ ಕೈಗೊಳಬೇಕು. ಸಚಿವ ಸಂಪುಟದಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಬೋಸರಾಜು ಹೇಳಿದ್ದೇನು?
ರಾಜ್ಯಪಾಲರಿಗೆ ದೂರು ನೀಡಿರುವ ಹಿನ್ನೆಲೆ ಸ್ಪಷ್ಟನೆ ನೀಡಿರುವ ಸಚಿವ ಎನ್.ಎಸ್.ಬೋಸರಾಜು ನನ್ನ ಪತ್ನಿ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು. 1987ರಲ್ಲಿ ಪಟ್ಟಾದಾರರಿಂದ ಕೃಷಿ ಭೂಮಿ ಖರೀದಿ ಮಾಡಿದ್ದೇನೆ ಎಂದು ಹೇಳಿದ್ದಾರೆ. 2022ರಲ್ಲಿ ಅರಣ್ಯ ಇಲಾಖೆಯವರು ನೋಟಿಸ್ ಕಳುಹಿಸಿದ್ದರು. ನೋಟಿಸ್ ವಿರುದ್ಧ ಕಲಬುರಗಿ ಹೈಕೋರ್ಟ್‌ಲ್ಲಿ ಚಾಲೆಂಜ್ ಮಾಡಿದ್ದೆವು. ಕೋರ್ಟ್‌ಲ್ಲಿ ಆ ಕೇಸ್ ರದ್ದುಗೊಂಡಿದೆ. ಹೀಗಾಗಿ ಸಮಸ್ಯೆ ಬಗೆಹರಿದಿದೆ ಎಂದಿದ್ದಾರೆ.

ನಮಗೆ ಮಾತ್ರವಲ್ಲ ಒಟ್ಟು 1700 ಎಕರೆ ಪ್ರದೇಶದ ಸರ್ವೇ ನಂಗಳಿಗೆ ನೋಟಿಸ್ ಕಳುಹಿಸಿದ್ದರು. ಎಲ್ಲಾ ಸರ್ವೇ ನಂ.ನವರು ನ್ಯಾಯಾಲಯಕ್ಕೆ ಹೋಗಿದ್ದಾರೆ. 1987ರಲ್ಲಿ ಭೂಮಿ ಖರೀದಿ ಮಾಡುವಾಗ ಆಗಲಿ, ಭೂಪರಿವರ್ತನೆ ವೇಳೆ ನಾನು ಯಾವುದೇ ಅಧಿಕಾರದಲ್ಲಿ ಇರಲಿಲ್ಲ. ಪ್ರಥಮ ಬಾರಿಗೆ ನಾನು ಶಾಸಕನಾಗಿದ್ದೇ 1999ರಲ್ಲಿ, ಮಂತ್ರಿಯಾಗಿದ್ದು ಒಂದೂವರೆ ವರ್ಷದ ಹಿಂದೆ. ಮಂತ್ರಿಯಾಗಿ ಪ್ರಭಾವ ಬೀರಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು ತಿಳಿಸಿದ್ದಾರೆ.ಇದನ್ನೂ ಓದಿ:ಇನ್ನೂ 3 ದಿನಗಳ ಕಾಲಾವಕಾಶವಿದೆ, ಸ್ಪರ್ಧೆ ಬಗ್ಗೆ ಚಿಂತನೆ ಮಾಡ್ತೀನಿ: ಡಿಕೆ ಸುರೇಶ್

Share This Article