ಆಮೆಗತಿಯಲ್ಲಿ ಸಾಗಿದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ – ಚುರುಕು ಮುಟ್ಟಿಸಲು ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ

Public TV
3 Min Read

– 5 ಇಲಾಖೆಗಳ ಸಚಿವರು, ಜಿಲ್ಲಾಧಿಕಾರಿಗಳು, ಸಿಇಓಗಳ ಜೊತೆ ಸಭೆ

ಬೆಂಗಳೂರು: ಆಮೆಗತಿಯಲ್ಲಿ ಸಾಗುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಚುರುಕು ಮುಟ್ಟಿಸಲು ಸಿಎಂ ಸಿದ್ದರಾಮಯ್ಯ ಅವರು ಸಚಿವರು, ಜಿಲ್ಲಾಧಿಕಾರಿಗಳು, ಸಿಇಓಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, 7 ಕೋಟಿ ಜನರ ಸಮೀಕ್ಷೆ ನಡೆಯುತ್ತಿದೆ. ನಾಲ್ಕು ದಿನಗಳಿಂದ ತಾಂತ್ರಿಕ ಸಮಸ್ಯೆಯಿಂದ ಸರ್ವೆ ಕಾರ್ಯ ಕುಂಠಿತವಾಗಿದೆ. ತಾಂತ್ರಿಕ ಸಮಸ್ಯೆಗಳು 90% ಪರಿಹಾರ ಆಗಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಉಳಿದ ಸಮಸ್ಯೆಗಳು ಇವತ್ತು ಪರಿಹಾರ ಆಗಲಿದೆ ಎಂದರು. ಇದನ್ನೂ ಓದಿ: ಜಾತಿಗಣತಿ ಸಮೀಕ್ಷೆ ಆರಂಭವಾಗಿ ಇಂದಿಗೆ 4 ದಿನ – 2.62 ಲಕ್ಷ ಮನೆಗಳ ಸರ್ವೆ ಮುಕ್ತಾಯ

ತೊಡಕುಗಳನ್ನ ಕೂಡಲೇ ನಿವಾರಣೆ ಮಾಡಬೇಕು. ಇವತ್ತಿನಿಂದ ಕೆಲಸ ಚುರುಕಾಗಲಿದೆ. ನಿರೀಕ್ಷೆಗೆ ಅನುಗುಣವಾಗಿ ಸರ್ವೆ ಕೆಲಸ ಆಗಲಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರೊಳಗೆ ಸರ್ವೆ ಕೆಲಸ ಮುಗಿಸಬೇಕು ಎಂದು ತೀರ್ಮಾನಿಸಿದ್ದೇವೆ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗಕ್ಕೂ ಸೂಚಿಸಿದ್ದೇನೆ.

ನಾಲ್ಕು ದಿನ ಸರ್ವೆ ಹೆಚ್ಚು ಆಗಿಲ್ಲ, ಉಳಿದ ದಿನಗಳಲ್ಲಿ ಕವರ್ ಮಾಡುವ ಕೆಲಸ ಆಗಬೇಕು. ಪ್ರತಿ ದಿನ 10% ಕುಟುಂಬಗಳ ಸರ್ವೆ ಆಗಬೇಕು. ಇದಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಶಿಕ್ಷಕರು ತಪ್ಪು ಕಲ್ಪನೆಯಿಂದ ತಿರಸ್ಕರಿಸುತ್ತಿದ್ದರು. ಎಲ್ಲರೂ ಒಪ್ಪಿ ಇವತ್ತಿನಿಂದ ಸರ್ವೇ ಕೆಲಸ ಪೂರ್ಣ ಆಗಿದೆ. ಇದು ಸರ್ಕಾರದ ಕೆಲಸ, ಸರ್ಕಾರ ಸರ್ವೆ ಮಾಡಿಸ್ತಿದೆ. ಗಂಭೀರವಾಗಿ ಪರಿಗಣಿಸುವಂತೆ ಡಿಸಿ, ಸಿಇಓಗಳಿಗೆ ಸೂಚನೆ ಕೊಟ್ಟಿದ್ದೇನೆ. ಪ್ರತಿದಿನ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು. ಪ್ರಾದೇಶಿಕ ಆಯುಕ್ತರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾನಿಟರ್ ಮಾಡಬೇಕು ಎಂದು ಸೂಚಿಸಿದ್ದೇನೆ ಎಂದು ಹೇಳಿದರು.

ಇಲ್ಲಿ ತನಕ 2% – 4% ಸರ್ವೇ ಆಗಿದೆ. ಈಗ ಪ್ರತಿದಿನ ಕನಿಷ್ಠ 10% ಸರ್ವೇ ಆಗಬೇಕು. ಹಿಂದಿನ ಸರ್ವೇಯ ಗಣತಿದಾರರ ಗೌರವಧನ ಬಿಡುಗಡೆ ಮಾಡಿದ್ದೇವೆ. ಈಗಿನ ಗೌರವಧನವನ್ನ ಬಿಡುಗಡೆ ಮಾಡಿದ್ದೇವೆ. ಯಾರೂ ಈ ಬಗ್ಗೆ ಸಂಶಯ ಪಡುವುದು ಬೇಡ. ಅನ್‌ಲೈನ್‌ನಲ್ಲೂ ಕೂಡ ಸರ್ವೇಯಲ್ಲಿ ಭಾಗವಹಿಸಬಹುದು. 2 ಕೋಟಿ ಮನೆಗಳಿವೆ, ಬೆಂಗಳೂರು ಸೇರಿ ಎಲ್ಲ ಮನೆಗಳ ಸರ್ವೇ ಮಾಡಬೇಕು. ಮನೆಗಳು ಬೀಗ ಹಾಕಿ ಕೆಲಸಕ್ಕೆ ಹೋಗಿದ್ರೆ, ಅವರ ಮನೆಗೆ ಸ್ಟಿಕ್ಕರ್ ಅಂಟಿಸಿ ಮುಂದಿನ ಡೇಟ್ ಕೊಡ್ತಾರೆ, ಮನೆಯವರಿಗೆ ಮಾಹಿತಿ ಕೊಡ್ತಾರೆ ಎಂದರು.

ಗಣತಿಗೆ ಶಿಕ್ಷಕರು ಒಪ್ಪದಿದ್ದರೆ ಶಿಕ್ಷಕರ ಮೇಲೆ ಕಾನೂನು ಪ್ರಕಾರ ಕ್ರಮ ಆಗಲಿದೆ. ಜಿಲ್ಲಾ ಸಚಿವರಿಗೂ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಹೇಳಿದ್ದೇನೆ. ಅವರು ಕೂಡ ಕೋ ಆರ್ಡಿನೇಟ್ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲ್ಲ. ಬೆಂಗಳೂರಲ್ಲಿ ಕಡಿಮೆ ಆಗಿತ್ತು, ಇವತ್ತಿಂದ ಸಂಪೂರ್ಣವಾಗಿ ಶುರುವಾಗಲಿದೆ ಕೋರ್ಟ್ ಆದೇಶ ಪಾಲಿಸಿಕೊಂಡೇ ಸರ್ವೆ ಮಾಡಲಾಗುತ್ತದೆ. ದಿನಾಂಕ ವಿಸ್ತರಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಸಭೆಯಲ್ಲಿ ಸಚಿವ ಹೆಚ್.ಕೆ.ಪಾಟೀಲ್, ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ, ರಹೀಂ ಖಾನ್, ಭೈರತಿ ಬಸವರಾಜ್, ಮಧು ಬಂಗಾರಪ್ಪ, ಬೋಸರಾಜು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಪೊನ್ನಣ್ಣ, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: 52 ಉಪಜಾತಿಗಳನ್ನ ತೆಗೆದಿದ್ದು ಬೇಸರ ಆಯ್ತು – ಕ್ಯಾಥೋಲಿಕ್ ಧರ್ಮಾಧ್ಯಕ್ಷ ಪೀಟರ್ ರಿಚರ್ಡ್

Share This Article