ಇರುವ ಅವಕಾಶ ಬಳಸಿಕೊಳ್ತಿದ್ದೇನೆ, ನಿಮಗೆ ಹೊಟ್ಟೆ ಉರಿ: ಝಿರೋ ಟ್ರಾಫಿಕ್‍ಗೆ ಡಿಸಿಎಂ ಸಮರ್ಥನೆ

Public TV
2 Min Read

ಬೆಂಗಳೂರು: ಝಿರೋ ಟ್ರಾಫಿಕ್ ವ್ಯವಸ್ಥೆ ನನಗೂ ಇದೆ, ಹೀಗಾಗಿ ಬಳಸಿಕೊಳ್ಳುತ್ತಿದ್ದೇನೆ. ಮಾಧ್ಯಮಗಳಿಗೆ ಝಿರೋ ಟ್ರಾಫಿಕ್ ತಗೆದುಕೊಳ್ಳುವುದು ಹೊಟ್ಟೆ ಉರಿ ಎನ್ನುವ ಮೂಲಕ ಡಿಸಿಎಂ ಜಿ.ಪರಮೇಶ್ವರ್ ಅಧಿಕಾರ ದರ್ಪ ಮೆರೆದಿದ್ದಾರೆ.

ಕೊಡವ ಸಮಾಜ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಗರದ ಮಿಲ್ಲರ್ಸ್ ರಸ್ತೆಯ ಜಂಕ್ಷನ್ ಬಳಿ ಫೀಲ್ಡ್ ಮಾರ್ಷಲ್ ಕಾರಿಯಪ್ಪರವರ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಇದರ ಉದ್ಘಾಟನಾ ಕಾರ್ಯಕ್ರಮಕ್ಕೆ ಡಿಸಿಎಂ ಪರಮೇಶ್ವರ್ ರವರನ್ನು ಆಹ್ವಾನಿಸಲಾಗಿತ್ತು. ಇಂದು ಸಹ ಝಿರೋ ಟ್ರಾಫಿಕ್ ಮೂಲಕವೇ ಕಾರ್ಯಕ್ರಮಕ್ಕೆ ಡಿಸಿಎಂ ಆಗಮಿಸಿದ್ದರು.

ಝಿರೋ ಟ್ರಾಫಿಕ್ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ ಮುಖ್ಯಮಂತ್ರಿಗಳು, ಗಣ್ಯವ್ಯಕ್ತಿ, ರಾಜ್ಯಪಾಲರು ಹಾಗೂ ಗೃಹ ಸಚಿವರಿಗೂ ಸಹ ಝಿರೋ ಟ್ರಾಫಿಕ್ ಅವಕಾಶ ನೀಡಲಾಗಿದೆ. ಹೀಗಾಗಿ ಇದನ್ನು ನಾನು ಬಳಸಿಕೊಳ್ಳುತ್ತಿದ್ದೇನೆ. ಝಿರೋ ಟ್ರಾಫಿಕ್ ಅಗತ್ಯ ಇದೆ ಎನ್ನುವುದರಿಂದ ಅವಕಾಶ ನೀಡಲಾಗಿದೆ. ಈ ಹಿಂದಿನ ಗೃಹ ಸಚಿವರು ಬೇಡ ಎಂದಿದ್ದರು. ಹಾಗಂತ ನಾನು ಸಹ ಬೇಡ ಎನ್ನಬೇಕಿಲ್ಲ. ನನಗೆ ಇರುವ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ನಾನು ಝಿರೋ ಟ್ರಾಫಿಕ್ ತೆಗೆದುಕೊಳ್ಳುವುದು ಮಾಧ್ಯಮಗಳಿಗೆ ಹೊಟ್ಟೆ ಹುರಿ ಎನ್ನುವ ಮೂಲಕ ಮತ್ತೊಮ್ಮ ತಮ್ಮ ಅಧಿಕಾರದ ದರ್ಪ ತೋರಿದ್ದಾರೆ.

ಇದೇ ವೇಳೆ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರಿಯಪ್ಪನವರು ಈ ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅವರ ಪರಿಶ್ರಮ ಅಪಾರ. ಇಂದು ಅವರ ಪ್ರತಿಮೆ ಅನಾವರಣ ಮಾಡುವ ಮೂಲಕ ಯುವಪೀಳಿಗೆಗೆ ಮಾದರಿಯಾಗಿದ್ದಾರೆ. ಅಲ್ಲದೇ ಮಿಲ್ಲರ್ಸ್ ಜಂಕ್ಷನ್‍ಗೆ ಕಾರಿಯಪ್ಪನಗರ ಹೆಸರನ್ನು ಇಡುವ ಪ್ರಸ್ತಾಪನೆಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೀನಿ ಎಂದು ಹೇಳಿದರು. ಸಮಾರಂಭ ಕಾರ್ಯಕ್ರಮಕ್ಕೆ ಸಂಸದ ಪಿಸಿ ಮೋಹನ್ ಸೇರಿದಂತೆ ಮೇಯರ್ ಸಂಪತ್ ರಾಜ್ ಭಾಗಿಯಾಗಿದ್ದರು.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮಂಗಳವಾರ ನಡೆದ ಸಿಎಲ್‍ಪಿ ಸಭೆಯಲ್ಲಿ ಯಾರು ಸಹ ನನ್ನ ವಿರುದ್ಧ ಮಾತನಾಡಿಲ್ಲ. ಯಾರು ಅಸಮಾಧಾನ ಹೊರ ಹಾಕಿಲ್ಲ. ಯಾವ ಶಾಸಕರು ನನ್ನ ವಿರುದ್ದ ಸಿಟ್ಟು ವ್ಯಕ್ತಪಡಿಸಿಲ್ಲ. ನಾನೇ ಸಭೆಯಲ್ಲಿ ಸಿಎಂ ಸಿಗಲಿಲ್ಲ ಅಂದರೆ ನನ್ನ ಹತ್ತಿರ ಬನ್ನಿ ನಾನೇ ಕೆಲಸ ಮಾಡಿಸಿಕೊಡ್ತೀನಿ ಎಂದು ಹೇಳಿದ್ದೀನಿ. ನನ್ನ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ ಮೇಯರ್ ಚುನಾವಣೆ ವಿಚಾರದ ಬಗ್ಗೆ ಮಾತನಾಡಿ, ಪಕ್ಷದ ಅಧ್ಯಕ್ಷರು ಬುಧವಾರ ಸಂಜೆ ಈ ಬಗ್ಗೆ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಮಾಡಿ ಫೈನಲ್ ಮಾಡುತ್ತೇನೆ. ರೇಸ್‍ನಲ್ಲಿ ಯಾರು ಯಾರು ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸಭೆಯ ಬಳಿಕ ಅಭ್ಯರ್ಥಿಯನ್ನು ಅಂತಿಮ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸಿಎಂ ಪರಮೇಶ್ವರ್ ದಾದಾಗಿರಿ – ಮಳೆಯ ನಡುವೆಯೂ ಝಿರೋ ಟ್ರಾಫಿಕ್‍ನಲ್ಲಿ ಸಂಚಾರ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *