ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್‌ ತಂದೆ

Public TV
2 Min Read

ಮಂಡ್ಯ: ಅನೇಕರು ಬಂದು ನನ್ನ ಮಗಳಿಗೆ ಹಣ, ಉಡುಗೊರೆ ಕೊಟ್ಟಿದ್ದಾರೆ. ಅದನ್ನು ನಾನು ಜನರ ಸೇವೆಗಾಗಿ ನೀಡುತ್ತೇನೆಂದು ಅಲ್ಲಾಹು ಅಕ್ಬರ್‌ ಎಂದು ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್‌ ತಂದೆ ಮಹಮ್ಮದ್‌ ಹುಸೇನ್‌ ಖಾನ್‌ ತಿಳಿಸಿದ್ದಾರೆ.

ಹಣ, ಉಡುಗೊರೆ ಕೊಡಲು ಬಂದವರಿಗೆ ಬೇಡ ಎಂದಿದ್ದೆವು. ಆದರೂ ಅವರು ನೀಡಿದ್ದಾರೆ. ಆ ಹಣದಲ್ಲಿ ಜನರ ಸೇವೆಗಾಗಿ ಆಂಬುಲೆನ್ಸ್‌ ಕೊಡುತ್ತೇನೆ. ದೇವರು ನಮ್ಮನ್ನು ಚೆನ್ನಾಗಿ ಇಟ್ಟಿದ್ದಾನೆ. ಅವರು ಕೊಟ್ಟ ದುಡ್ಡನ್ನು ಜನಸೇವೆಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

muskhan

ಅಲ್‌‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥನಿಂದ ಮುಸ್ಕಾನ್ ಹೊಗಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಯಾರು ಅನ್ನೋದು ನನಗೆ ಗೊತ್ತಿಲ್ಲ. ಮಾಧ್ಯಮಗಳ ಮುಖಾಂತರ ಈ ವಿಚಾರ ತಿಳಿಯಿತು. ಅರಬ್ಬಿ ಭಾಷೆಯಲ್ಲಿ ಮಗಳನ್ನು ಹೊಗಳಿದ್ದಾರೆ. ಆದರೆ ಅವರ ಬಗ್ಗೆ ನನಗೇನೂ ಗೊತ್ತಿಲ್ಲ. ಇದೆಲ್ಲಾ ತಪ್ಪು, ಗೊಂದಲ ಮಾಡಿ ನಮ್ಮ ನಮ್ಮಲ್ಲಿ ಜಗಳ ತಂದಿಡಲು ಮಾಡ್ತಿದ್ದಾರೆ. ಈ ರೀತಿಯ ಹೊಗಳಿಗೆ ಬೇಕಾಗಿಲ್ಲ. ಅವರ ಬಗ್ಗೆ ಏನು ಗೊತ್ತಿಲ್ಲದೇ ಇದ್ದಾಗ ನಾನೇನು ಹೇಳಲು ಸಾಧ್ಯ? ಹಿಜಾಬ್ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇರುವುದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ಯಾರ‍್ಯಾರು ಏನೇನು ಮಾಡ್ತಿದ್ದಾರೋ ಗೊತ್ತಿಲ್ಲ‌. ನಾವು ಇಲ್ಲಿ ಬದುಕಿ ಜೀವನ ಮಾಡ್ತಿದ್ದೇವೆ. ಅಣ್ಣ ತಮ್ಮಂದಿರ ಹಾಗೆ ಪ್ರೀತಿ ಹಂಚಿ ಜೀವನ ಮಾಡ್ತಿದ್ದೇವೆ. ಬೇರೆ ದೇಶದವರು ಏನು ಮಾಡ್ತಿದ್ದಾರೋ ಗೊತ್ತಿಲ್ಲ. ನಮ್ಮ ದೇಶದಲ್ಲಿ ನಾವು ನೆಮ್ಮದಿಯಿಂದ ಇದ್ದೇವೆ. ಅವರ ದೇಶಗಳಲ್ಲಿ ಅವರು ನೋಡಿಕೊಳ್ಳಲಿ. ಅವರ ಮಾತುಗಳಿಗೆ ತಲೆಕೆಡಿಸಿಕೊಳ್ಳಲು ಆಗಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಮುಸ್ಕಾನ್‍ಳನ್ನು ಅಲ್‍ಖೈದಾ ಮುಖ್ಯಸ್ಥ ಬೆಂಬಲಿಸಿರುವುದು ಆತಂಕಕಾರಿ: ಮುತಾಲಿಕ್

ಮಗಳ ಪರೀಕ್ಷೆ ವಿಚಾರವಾಗಿ ಮಾತನಾಡಿ, ಪರೀಕ್ಷೆ ವೇಳೆ ಪ್ರತ್ಯೇಕ ಕೊಠಡಿ ನೀಡುವಂತೆ ಕಾಲೇಜು ಪ್ರಾಂಶುಪಾಲರನ್ನ ಕೇಳಿಕೊಂಡಿದ್ದೆವು. ಹಿಜಬ್ ಬೇಡ ವೇಲು ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದಿದ್ದೆವು. ಕಾಲೇಜು ಆಡಳಿತ ಮಂಡಳಿ ಅದಕ್ಕೆ ಅವಕಾಶ ನೀಡಲಿಲ್ಲ. ನನ್ನ ಮಗಳ ಪ್ರಾಣಕ್ಕೆ ಅಪಾಯ ಇದೆ. ನಾಳೆ ಮಗಳಿಗೆ ತೊಂದರೆ ಆದರೆ ಯಾರು ಜವಾಬ್ದಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಜಬ್‌ಗೆ ಅನುಮತಿ ಇರುವ ಕಾಲೇಜಿಗೆ ಮಗಳನ್ನು ಸೇರಿಸುತ್ತೇನೆ. ಹಿಜಬ್ ಕಾರಣಕ್ಕಾಗಿಯೇ ನಾನು ಮಗಳ ಕಾಲೇಜನ್ನು ಬದಲಾಯಿಸುತ್ತಿದ್ದೇನೆ. ಹಿಜಬ್ ಅಥವಾ ವೇಲು ಹಾಕಿಕೊಳ್ಳಲು ಅವಕಾಶ ನೀಡಿದರೆ ಮಂಡ್ಯದಲ್ಲೇ ದಾಖಲಿಸುತ್ತೇವೆ. ಇಲ್ಲ ಅಂದ್ರೆ, ಮೈಸೂರಿನಲ್ಲಿ ಹಿಜಬ್ ಅನುಮತಿ ನೀಡುವ ಕಾಲೇಜುಗಳಿವೆ. ಅಲ್ಲಿಯೇ ಸೇರಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ: ಸಿದ್ದರಾಮಯ್ಯ

ನನ್ನ ಮಗಳಿಗೆ ಜೀವ ಭಯ ಇದೆ. ಮಗಳ ಜವಾಬ್ದಾರಿ ತೆಗೆದುಕೊಳ್ತೀರಾ ಅಂತ ಕಾಲೇಜಿನವರನ್ನ ಕೇಳಿದೆ. ಅವರು ಆಗಲ್ಲ ಅಂದ್ರು. ಅದಕ್ಕಾಗಿ ಬೇರೆ ಕಾಲೇಜಿಗೆ ದಾಖಲಿಸುತ್ತೇನೆ. ಸಮವಸ್ತ್ರಕ್ಕೆ ನಾವೇ ಶುಲ್ಕ ಕಟ್ಟೋದು. ಕಾಲೇಜಿನವರು ನಮ್ಮ ಕರೆಸಿ ಸಮವಸ್ತ್ರ ನೀಡುತ್ತಿದ್ದೇವೆ ಎಂದು ಹೇಳಿದ್ದಾರಾ? ಈ ಘಟನೆ ಬಳಿಕ ಅಲ್ಲಿನ ಸ್ಥಿತಿ ಅರ್ಥ ಆಗಿದೆ‌. ಯಾರ ಹೊಗಳಿಕೆ, ಉಡುಗೊರೆ ನಮಗೆ ಬೇಡ. ನಾವು ಎಲ್ಲರ ಜೊತೆ ಅಣ್ಣ, ತಮ್ಮಂದಿರ ಹಾಗೇ ಇದ್ದೇವೆ. ಕರ್ನಾಟಕದ ಜನ ಯಾರ ಮಾತನ್ನು ನಂಬಬೇಡಿ. ಉಗ್ರ ಸಂಘಟನೆ ಮುಖ್ಯಸ್ಥನ ಹೊಗಳಿಗೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *