ಬದುಕಲು ಸಾಧ್ಯವಾಗುತ್ತಿಲ್ಲ, ದಯಮಾಡಿ ನನಗೆ ವಿಷ ಕೊಡಿ: ಜಡ್ಜ್‌ ಮುಂದೆ ದರ್ಶನ್‌ ಮನವಿ

Public TV
1 Min Read

ಬೆಂಗಳೂರು: ದಯಮಾಡಿ ನನಗೆ ವಿಷ (Poison) ಕೊಡಿ ಎಂದು ನಟ ದರ್ಶನ್‌ (Darshan) ನ್ಯಾಯಾಧೀಶರ (Judge) ಮುಂದೆ ಮನವಿ ಮಾಡಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನು ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ಇಂದು ನಗರದ 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.

ವಿಚಾರಣೆ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪರಪ್ಪನ ಅಗ್ರಹಾರದಿಂದ ಹಾಜರಾದ ದರ್ಶನ್‌, ನನಗೆ ದಯಮಾಡಿ ವಿಷ ನೀಡಿ. ಬಿಸಿಲು ನೋಡಿ ಬಹಳ ದಿನವಾಗಿದೆ. ಬಟ್ಟೆಗಳು ವಾಸನೆ ಬರುತ್ತಿವೆ. ಫಂಗಸ್‌ನಿಂದಾಗಿ ಇಲ್ಲಿ ಬದುಕಲು ಆಗುತ್ತಿಲ್ಲ. ದಯಮಾಡಿ ನನಗೆ ವಿಷ ನೀಡುವಂತೆ ಆದೇಶಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ದರ್ಶನ್ ಅಮೇಝಿಂಗ್ ವ್ಯಕ್ತಿ ಕ್ರಾಂತಿ ಸೆಟ್‍ನ ಮೆಲುಕು ಹಾಕಿದ ಪುಷ್ಪವತಿ

 

ಈ ಮನವಿಗೆ ಜಡ್ಜ್‌ ಹಾಗೆಲ್ಲ ಆದೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ವಿಷ ಕೊಡಿ ಎಂದು ದರ್ಶನ್‌ ಮೂರು ಬಾರಿ ಬೇಡಿಕೊಂಡರೆ ಫಂಗಸ್‌ ಆಗಿದೆ ಎಂದು ಹಲವು ಬಾರಿ ಅಳಲು ತೋಡಿಕೊಂಡರು.  ದೈವ ಭಕ್ತರಾಗಿರುವ ದರ್ಶನ್‌ ಇಂದು ಹಣೆಗೆ ಕುಂಕುಮ ಹಚ್ಚಿಕೊಂಡು ವಿಚಾರಣೆಗೆ ಹಾಜರಾಗಿದ್ದು ವಿಶೇಷವಾಗಿತ್ತು.

ಪ್ರಾಸಿಕ್ಯೂಷನ್ ಮತ್ತು ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕೋರ್ಟ್‌ ಇಂದು ಮಧ್ಯಾಹ್ನ 3 ಗಂಟೆಗೆ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

Share This Article