80ಕ್ಕೆ 80 ಸೀಟ್‌ ಗೆದ್ದರೂ ಇವಿಎಂ ಮೇಲೆ ನಂಬಿಕೆ ಬರಲ್ಲ: ಅಖಿಲೇಶ್‌ ಯಾದವ್‌

Public TV
2 Min Read

ನವದೆಹಲಿ: ಇವಿಎಂ (EVM) ಬಗ್ಗೆ ನಿನ್ನೆಯೂ ಭರವಸೆ ಇಲ್ಲ, ಇಂದು ಭರವಸೆ ಇಲ್ಲ. ಉತ್ತರ ಪ್ರದೇಶದಲ್ಲಿ (Uttar Pradesh) 80 ಕ್ಕೆ 80 ಕ್ಕೆ ಸೀಟು ಗೆದ್ದರೂ ನಂಬಿಕೆ ಬರುವುದಿಲ್ಲ ಎಂದು ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ (Akhilesh Yadav)ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಅವರು, ಇವಿಎಂ ವಿರುದ್ಧ ಎಸ್‌ಪಿ ಹೋರಾಟ ಮಾಡುತ್ತಲೇ ಇರುತ್ತದೆ. ಇವಿಎಂ ಮೂಲಕವೇ ಗೆದ್ದು ಇವಿಎಂ ರದ್ದು ಮಾಡುತ್ತೇವೆ ಎಂದು ಹೇಳಿದರು. ಅಖಿಲೇಶ್‌ ಹೇಳಿಕೆಗೆ ರಾಹುಲ್‌ ಗಾಂಧಿ (Rahul Gandhi), ದಯಾನಿಧಿ ಮಾರನ್‌ ಸೇರಿದಂತೆ ಪ್ರತಿಪಕ್ಷ ನಾಯಕರು ಮೆಚ್ಚು ಕುಟ್ಟಿ ಬೆಂಬಲ ವ್ಯಕ್ತಪಡಿಸಿದರು.


ಉತ್ತರ ಪ್ರದೇಶಕ್ಕೆ ಬಹಳ ಅನ್ಯಾಯವಾಗಿದೆ. ಕೇವಲ ಮೂಲಸೌಕರ್ಯಗಳ ವಿಚಾರದಲ್ಲಿ ಮಾತ್ರ ಅನ್ಯಾಯವಾಗಿಲ್ಲ. ಪ್ರಧಾನಿ ಮೋದಿ ಅವರು ತಾನು ದತ್ತು ಪಡೆದ ಗ್ರಾಮ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು. ಆದರೆ ಆ ಗ್ರಾಮ ಇನ್ನೂ ಅಭಿವೃದ್ಧಿಯಾಗಿಲ್ಲ. ಕಿತ್ತು ಹೋದ ರಸ್ತೆ, ವಿದ್ಯುತ್ ಕಡಿತ ಆಗುತ್ತಿದೆ. ದತ್ತು ಪಡೆದ ಬಳಿಕ ಅನಾಥ ಮಾಡುವುದು ಸರಿಯಲ್ಲ ಎಂದರು.

ಅಗ್ನಿವೀರ್‌ ಮೂಲಕ ರಕ್ಷಣಾ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ನಾವು ಆ ಯೋಜನೆಯನ್ನು ಯಾವತ್ತೂ ಸ್ವೀಕರಿಸುವುದಿಲ್ಲ. ಇಂಡಿಯಾ ಒಕ್ಕೂಟ ಯಾವಾಗ ಅಧಿಕಾರಕ್ಕೆ ಬಂದರೂ ಅದನ್ನು ನಾವು ರದ್ದು ಮಾಡುತ್ತೇವೆ ಎಂದು ಹೇಳಿದರು.


ಸರ್ಕಾರ ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಭರವಸೆ ನೀಡಿತ್ತು. ರೈತರು ಈಗಲೂ ದ್ವಿಗುಣ ನಿರೀಕ್ಷೆಯಲ್ಲಿದ್ದಾರೆ. ಈ ಸರ್ಕಾರ ಹೊಸ ಮಂಡಿಯನ್ನು ಸ್ಥಾಪನೆ ಮಾಡಿಲ್ಲ ಎಂದು ದೂರಿದರು.

Share This Article