ಬಿರು ಬೇಸಿಗೆಯಲ್ಲೂ ಕರೆಂಟ್ ಇಲ್ಲದೆ ಮ್ಯಾನೇಜ್ ಮಾಡ್ತೀನಿ- ಮಹಿಳಾ ಪ್ರೊಫೆಸರ್

Public TV
2 Min Read

– ನೈಸರ್ಗಿಕ ಪರಿಸರವೇ ನನ್ನ ಆಸ್ತಿ

ಪುಣೆ: ಈ ಬಾರಿ ಬಿಸಿಲು ಸುಡುತ್ತಿದ್ದು, ವಿದ್ಯುತ್ ಇಲ್ಲದೇ ಇದ್ದರೆ ಹೇಗಪ್ಪ ನಗರದಲ್ಲಿ ಬದುಕುವುದು ಎಂದು ಕೆಲ ವ್ಯಕ್ತಿಗಳು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ 79 ವರ್ಷದ ಮಹಿಳಾ ಪ್ರೊಫೆಸರ್ ಒಬ್ಬರು ವಿದ್ಯುತ್ ಇಲ್ಲದೆ ಜೀವನ ನಡೆಸುತ್ತೇನೆ ಎಂದು ಹೇಳುತ್ತಿದ್ದಾರೆ.

ಹೌದು ಡಾ. ಹೇಮಾ ಅವರು ಪುಣೆಯ ಬುಧ್ವಾರ್ ಪೆತ್ ಎಂಬಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದು, ಹುಟ್ಟಿದಾಗಿನಿಂದಲೂ ವಿದ್ಯುತ್ ಉಪಯೋಗಿಸಿಲ್ಲ. ಇವರು ಪುಣೆಯ ಸಾವಿತ್ರಿಭಾಯ್ ಪುಲೆ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದು ಆ ಬಳಿಕ ಹಲವಾರು ವರ್ಷ ಪುಣೆಯ ಗರ್ವಾರೆ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು.

ಆಹಾರ, ಆಶ್ರಯ ಹಾಗೂ ಬಟ್ಟೆ ಮನುಷ್ಯನಿಗೆ ಬೇಕಾದ ಮೂಲಭೂತ ಅಗತ್ಯತೆಗಳು. ಒಂದು ಕಾಲದಲ್ಲಿ ವಿದ್ಯುತ್ ಇರಲೇ ಇಲ್ಲ. ನಾನು ಹುಟ್ಟಿ ಹಲವು ವರ್ಷಗಳ ಬಳಿಕ ವಿದ್ಯುತ್ ಬಂದಿದ್ದು, ಹೀಗಾಗಿ ಇದೀಗ ವಿದ್ಯುತ್ ಇಲ್ಲದೇ ಜೀವನ ನಡೆಸಬಲ್ಲೆನು ಎಂದು ಧೈರ್ಯವಾಗಿ ಹೇಳುತ್ತಿದ್ದಾರೆ.

ವಿದ್ಯುತ್ ಬೇಡ ಯಾಕೆ?
ಪರಿಸರದ ಮೇಲಿನ ಪ್ರೀತಿಯಿಂದ ನಾನು ವಿದ್ಯುತ್ ಬಳಕೆ ಮಾಡಲ್ಲ. ನಾಯಿ, 2 ಬೆಕ್ಕು ಹಾಗೂ ಪಕ್ಷಿಗಳೇ ನನ್ನ ಆಸ್ತಿ. ಇವುಗಳನ್ನು ನೋಡಿಕೊಳ್ಳುವುದಕ್ಕಾಗಿಯೇ ನಾನಿಲ್ಲಿದ್ದೇನೆ. ಜನ ನನ್ನ ಮೂರ್ಖಳು ಎಂದು ಕರೆಯಬಹುದು. ಅಥವಾ ಹುಚ್ಚಿ ಅಂದರೂ ನನಗೆ ಬೇಜಾರಿಲ್ಲ. ಇದು ನನ್ನ ಜೀವನವಾಗಿದೆ. ನಾನು ಇಷ್ಟಪಟ್ಟಂತೆ ಇಲ್ಲಿ ಬದುಕುತ್ತಿದ್ದೇನೆ ಎಂದು ಪ್ರೊಫೆಸರ್ ಹೇಳಿದ್ದಾರೆ.

ಇವರ ಮನೆಯ ಸುತ್ತಲೂ ವಿವಿಧ ರೀತಿಯ ಮರಗಳಿದ್ದು, ಹಲವು ಬಗೆಯ ಪಕ್ಷಿಗಳು ಹಾರಾಡುತ್ತಿವೆ. ಹಕ್ಕಿಗಳ ಬೆಳಗ್ಗಿನ ಕಲರವದಿಂದಲೇ ಇವರ ಜೀವನ ಆರಂಭವಾಗುತ್ತಿದ್ದು, ಆಕಾಶದಲ್ಲಿ ನಕ್ಷತ್ರಗಳನ್ನು ನೋಡುವ ಮೂಲಕ ದಿನ ಕೊನೆಯಾಗುತ್ತದೆ. ಇವರು ಪರಿಸರಕ್ಕೆ ಸಂಬಂಧಿಸಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದು, ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಇವತ್ತಿಗೂ ಅವರು ಪುಸ್ತಕಗಳನ್ನು ಬರೆಯುತ್ತಿದ್ದಾರೆ.

ನನಗೆ ನನ್ನ ಜೀವನದಲ್ಲಿ ಒಮ್ಮೆಯೂ ವಿದ್ಯುತ್ ಬೇಕು ಅನ್ನಿಸಿಲ್ಲ. ಎಲೆಕ್ಟ್ರಿಸಿಟಿ ಇಲ್ಲದೇ ಹೇಗೆ ಜೀವನ ಮಾಡ್ತೀಯಾ ಎಂದು ಹಲವು ಮಂದಿ ನನ್ನನ್ನು ಪ್ರಶ್ನಿಸಿದ್ದಾರೆ. ಆಗ ನಾನು ಜೀವನ ಮಾಡಲು ಕರೆಂಟ್ ಯಾಕೆ ಬೇಕು ಎಂದು ಮರುಪ್ರಶ್ನೆ ಹಾಕುತ್ತಿದ್ದೆ. ಪಕ್ಷಿಗಳೇ ನನ್ನ ಗೆಳೆಯರು. ನಾನು ಮನೆ ಕೆಲಸ ಮಾಡುವಾಗ ಅವುಗಳು ಕೂಡ ಬರುತ್ತವೆ. ನೀವು ಯಾಕೆ ಈ ಮನೆ ಮಾರುತ್ತಿಲ್ಲ. ಮಾರಿದ್ರೆ ನಿಮ್ಮ ತುಂಬಾ ಹಣ ಬರಬಹುದು ಅಲ್ಲವೇ ಎಂದು ಹಲವು ಮಂದಿ ನನ್ನ ಕೇಳಿದ್ದರು. ನಾನು ಮನೆ ಮಾರಿದ್ರೆ ಮರ ಹಾಗೂ ನನ್ನ ಮರ ಹಾಗೂ ಪಕ್ಷಿಗಳನ್ನು ಯಾರು ನೋಡಿಕೊಳ್ಳುತ್ತಾರೆ. ಹೀಗಾಗಿ ನಾನು ಎಲ್ಲಗೂ ಹೋಗುವುದಿಲ್ಲ. ಇವುಗಳ ಜೊತೆಯೇ ವಾಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *