ಅಂದು ನನ್ನ ಒಂದು ದಿನ ಜೈಲಿಗೆ ಹಾಕಿದ್ದಕ್ಕೆ ಇಂದು ನಾನು ಎಂಎಲ್‌ಎ ಆದೆ: ಪ್ರದೀಪ್ ಈಶ್ವರ್

Public TV
2 Min Read

ಚಿಕ್ಕಬಳ್ಳಾಪುರ: ನನ್ನ ಒಂದು ದಿನ ಅಣಕನೂರು ಜೈಲಿಗೆ (Jail) ಹಾಕಿದ್ದಕ್ಕೆ ನಾನು ಇಂದು ಎಂಎಲ್‌ಎ (MLA) ಆಗಿದ್ದೇನೆ. ಜೈಲಿಗೆ ಹಾಕಿಲ್ಲ ಎಂದಿದ್ದರೆ ನಾನು ಲೆಕ್ಚರರ್ ಆಗಿ ಇರುತ್ತಿದ್ದೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುಧಾಕರ್ (K Sudhakar) ವಿರುದ್ಧ ನೂತನ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾ ಪಂಚಾಯಿತಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಪ್ರದೀಪ್ ಈಶ್ವರ್, ಜನ ಸಣ್ಣ ಪುಟ್ಟ ಕಾರಣಗಳಿಗೆ ಪೊಲೀಸ್ ಠಾಣೆಗೆ ಬರುತ್ತಾರೆ, ಹೀಗಾಗಿ ವಿನಾಕಾರಣ ಠಾಣೆಗೆ ಬಂದವರದ್ದೆಲ್ಲಾ ಎಫ್‌ಐಆರ್ ಮಾಡಬೇಡಿ. ಕೂತು ಮಾತನಾಡಿಸಿ ರಾಜೀ ಮಾಡಲು ಪ್ರಯತ್ನ ಮಾಡಿ. ಸಾಧ್ಯವಾಗದ ಪ್ರಕರಣಗಳಲ್ಲಿ ಎಫ್‌ಐಆರ್ ಮಾಡಿ. ಆದರೆ ವಿನಾಕಾರಣ ಯಾರದೋ ಕುಮ್ಮಕ್ಕಿನಿಂದ ಸುಳ್ಳು ದೂರು ದಾಖಲಿಸಬೇಡಿ ಎಂದು ಪೊಲೀಸರಿಗೆ ತಿಳಿಸಿದರು.

ಯಾರ ಮಾತು ಕೇಳಬೇಡಿ, ನನ್ನ ಮಾತು ಕೇಳಬೇಡಿ, ಕಾನೂನು ರೀತಿಯ ಕೆಲಸ ಮಾಡಿ, ನಾನು ನಿಮ್ಮ ಮೇಲೆ ಒತ್ತಡ ಹಾಕಲ್ಲ. ಹಿಂದಿನ ಶಾಸಕರ ಒತ್ತಡಕ್ಕೆ ಮಣಿದು ನೀವು ನನ್ನ ಮೇಲೆ ಎಫ್‌ಐಆರ್‌ಗಳನ್ನು ಹಾಕಿ ಒಂದು ದಿನ ಅಣಕನೂರು ಜೈಲಿಗೆ ಕಳುಹಿಸಿದ್ದೀರಿ. ನಾನು ಯಾರ ಪರವಾಗಿ ನಿಂತೆನೋ ಅವರು ಸುಧಾಕರ್ ಜೊತೆ ಸೇರಿಕೊಂಡರು. ನಾನು ಮಾಡಿದ ತಪ್ಪೇನು? ಸುಧಾಕರ್ ಬೆಂಬಲಿಗರಾದ್ರೂ ಅಷ್ಟೇ, ಬಚ್ಚೇಗೌಡರ ಬೆಂಬಲಿಗರಾದರೂ ಅಷ್ಟೇ, ನಮ್ಮ ಬೆಂಬಲಿಗರಾದರೂ ಅಷ್ಟೇ. ಕಾನೂನು ಪ್ರಕಾರ ಕ್ರಮ ವಹಿಸಿ. ಯಾರನ್ನೂ ಟಾರ್ಗೆಟ್ ಮಾಡಬೇಡಿ ಎಂದರು. ಇದನ್ನೂ ಓದಿ: ಹಿಜಬ್‌ ವಿವಾದದಿಂದ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ; ಸಮವಸ್ತ್ರ ಆದೇಶ ಪರಿಷ್ಕರಿಸಿ – ಸಿಎಂಗೆ ಸಾಹಿತಿಗಳು, ಬರಹಗಾರರ ಪತ್ರ

ಪೊಲೀಸ್ ಇಲಾಖೆಯವರು ಅಂದು ಒಂದು ದಿನ ಅಣಕನೂರು ಜೈಲಲ್ಲಿ ಕೂರಿಸಿದ್ದರಿಂದ ಪಾಸಿಟಿವ್ ಆಗಿ ತೆಗೆದುಕೊಂಡು ನಾನು ಇಂದು ಎಂಎಲ್‌ಎ ಆಗಿದ್ದೀನಿ. ಇಲ್ಲ ಅಂದ್ರೆ ಲೆಕ್ಚರರ್ ಆಗೇ ಇರ್ತಿದ್ದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಸುಧಾಕರ್ ಅವರು, ಬಚ್ಚೇಗೌಡರು, ನನಗೂ ಸಹ ಅಧಿಕಾರ ಶಾಶ್ವತ ಅಲ್ಲ. ನನ್ನ ಮೀರಿಸೋವವನು 5 ವರ್ಷಕ್ಕೆ ಬರಬಹುದು. ನಾವು ಮಾಡಿರೋ ಕೆಲಸಗಳು ನಮ್ಮನ್ನು ಕಾಪಾಡುತ್ತವೆ. ಅಣಕನೂರು ಜೈಲು ಅನುಭವ ಕಠೋರ ಹಾಗಾಗಿ ಮಾನವೀಯತೆ ಆಧಾರದ ಮೇಲೆ ಸಾಧ್ಯವಾದಷ್ಟು ರಾಜೀ ಪಂಚಾಯತಿ ಮಾಡಿಸಿ ಅಂತ ಮನವಿ ಮಾಡಿದರು.

2018ರ ಚುನಾವಣೆ ವೇಳೆ ಪ್ರದೀಪ್ ಈಶ್ವರ್ ಅಂದು ಪಕ್ಷೇತರ ಅಭ್ಯರ್ಥಿ ಇಂದು ಸುಧಾಕರ್ ಬೆಂಬಲಿಗರಾಗಿರುವ ನವೀನ್ ಕಿರಣ್ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಇದಕ್ಕೂ ಮುನ್ನ ಸುಧಾಕರ್ ವಿರುದ್ಧ ಹತ್ತು ಹಲವು ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುಧಾಕರ್‌ಗೆ ಪ್ರಶ್ನೆ ಮಾಡಿದ್ದರು. ಈ ಕಾರಣ ಪ್ರದೀಪ್ ಈಶ್ವರ್ ವಿರುದ್ಧ ಹತ್ತು ಹಲವು ಕೇಸ್‌ಗಳು ದಾಖಲಾಗಿ ಜೈಲುವಾಸ ಸಹ ಅನುಭವಿಸಿದ್ದರು. ಇದನ್ನೂ ಓದಿ: ಗ್ಯಾರಂಟಿಗಳ ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡ್ತೀವಿ: ಹೆಚ್‌ಕೆ ಪಾಟೀಲ್

Share This Article