‘ಆಂಟಿ ಪ್ರೀತ್ಸೆ’ ಚಿತ್ರದಲ್ಲಿ ನಟಿಸಲು ಅವಕಾಶ ಕೇಳಿಕೊಂಡು ಹೋಗಿದ್ದೆ : ನಟ ದರ್ಶನ್

Public TV
1 Min Read

ನ್ನಡದ ಸ್ಟಾರ್ ನಟ ದರ್ಶನ್ (Darshan), ಹೀರೋ ಆಗುವುದಕ್ಕೂ ಮುನ್ನ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿರುವ ವಿಚಾರ ಗೊತ್ತೇ ಇದೆ. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ದರ್ಶನ್ ಮೆಜೆಸ್ಟಿಕ್ ಮೂಲಕ ಹೀರೋ ಆದವರು. ಅದಕ್ಕೂ ಮುನ್ನ ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬಂದಿದ್ದ ‘ಆಂಟಿ ಪ್ರೀತ್ಸೆ’ (Aunty Preetse) ಸಿನಿಮಾದಲ್ಲಿ ನಟಿಸಲು ಅವಕಾಶ ಕೇಳಿಕೊಂಡು ಹೋಗಿದ್ದರಂತೆ ದರ್ಶನ್.

ನಿರ್ಮಾಪಕ, ಶಾಸಕ ಮುನಿರತ್ನ (Muniratna) ಅವರ ನೇತೃತ್ವದಲ್ಲಿ ನಿನ್ನೆ ಬೆಂಗಳೂರಿನಲ್ಲಿ ನಡೆದ ಮಹಾಶಿವರಾತ್ರಿ ಕಾರ್ಯಕ್ರಮಕ್ಕೆ ಅತಿಥಿ ಆಗಿ ಆಗಮಿಸಿದ್ದ ದರ್ಶನ್, ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ವೇದಿಕೆಯ ಮೇಲೆ ಮುನಿರತ್ನ ಅವರನ್ನು ಉದ್ದೇಶಿಸಿ ಮಾತನಾಡಿದ ದರ್ಶನ್, ‘ನೀವು ಆಂಟಿ ಪ್ರೀತ್ಸೆ ಸಿನಿಮಾ ಮಾಡುತ್ತಿದ್ದೀರಿ. ಆ ವೇಳೆಯಲ್ಲಿ ನಾನು ಫೋಟೋ ಹಿಡಿದುಕೊಂಡು ನಿರ್ದೇಶಕ ವಾಸು ಅವರ ಬಳಿ ಹೋಗಿದ್ದೆ. ಎಲ್ಲ ಪಾತ್ರಗಳಿಗೂ ಕಲಾವಿದರು ಆಯ್ಕೆಯಾಗಿದ್ದಾರೆ ಎಂದು ಕಳುಹಿಸಿದರು’ ಎಂದರು ದರ್ಶನ್.

ದರ್ಶನ್ ಮಾತಿಗೆ ವೇದಿಕೆಯ ಮೇಲೆಯೇ ಪ್ರತಿಕ್ರಿಯೆ ನೀಡಿದ ಮುನಿರತ್ನ, ಆಗ ಅವಕಾಶ ಸಿಗದೇ ಇದ್ದದ್ದು ಒಳ್ಳೆಯದೇ ಆಯಿತು ಎಂದರು. ಆಂಟಿ ಪ್ರೀತ್ಸೆ ಸಿನಿಮಾ 2001ರಲ್ಲಿ ಬಿಡುಗಡೆ ಆಯಿತು. ಖುಷ್ಭೂ, ರಾಮ್ ಕುಮಾರ್ ಈ ಸಿನಿಮಾದ ನಾಯಕಿ ಮತ್ತು ನಾಯಕ. ಈ ಸಿನಿಮಾ ರಿಲೀಸ್ ಆಗಿ ಕೇವಲ ಒಂದೇ ಒಂದು ವರ್ಷಕ್ಕೆ ದರ್ಶನ್ ಮೆಜೆಸ್ಟಿಕ್ ಮೂಲಕ ಹೀರೋ ಆದರು. ಮೆಜೆಸ್ಟಿಕ್ ಸಿನಿಮಾ 2002ರಲ್ಲಿ ಬಿಡುಗಡೆ ಆಯಿತು. ಹಿಟ್ ಕೂಡ ಆಯಿತು.

 

ಅಲ್ಲಿಂದ ದರ್ಶನ್ ತಿರುಗಿ ಕೂಡ ನೋಡಲಿಲ್ಲ. ಒಂದರ ಮೇಲೊಂದು ಸಿನಿಮಾ ಮಾಡುತ್ತಲೇ ಸಾಗಿದರು. ಇದೇ ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬಂದ ಅನಾಥರು ಹಾಗೂ ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ನಾಯಕನಾಗಿ ಮಿಂಚಿದ್ದಾರೆ. ಈ ಎಲ್ಲ ನೆನಪುಗಳನ್ನು ದರ್ಶನ್ ಮೆಲುಕು ಹಾಕಿದರು.

Share This Article