ದೇಶವಾಸಿಗಳಲ್ಲಿ ಕ್ಷಮೆ ಕೋರಿದ ಪ್ರಧಾನಿ ಮೋದಿ

Public TV
2 Min Read

ನವದೆಹಲಿ: ನಿಮ್ಮ ಜೀವನದಲ್ಲಿ, ವಿಶೇಷವಾಗಿ ಬಡ ಜನರಿಗೆ ತೊಂದರೆ ಉಂಟುಮಾಡಿದ ಲಾಕ್‍ಡೌನ್ ಕಠಿಣ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೊನಾ ವಿಚಾರದ ಬಗ್ಗೆ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದಕ್ಕೆ ಕೆಲವರು ನನ್ನ ಮೇಲೆ ಕೋಪಗೊಂಡಿದ್ದಾರೆ ಅಂತ ನನಗೆ ತಿಳಿದಿದೆ. ಬಡವರಿಗೆ ಇದರಿಂದ ಸಮಸ್ಯೆಯಾಗಿದೆ ಎನ್ನುವುದು ನನಗೆ ಗೊತ್ತಾಗಿದೆ. ಆದರೆ ಈ ಯುದ್ಧವನ್ನು ಗೆಲ್ಲಲು ಇಂತಹ ಕಠಿಣ ಕ್ರಮಗಳು ಅಗತ್ಯವಾಗಿತ್ತು.ದೇಶದ ಎಲ್ಲರ ರಕ್ಷಣೆಗಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಕೋವಿಡ್-19 ವಿರುದ್ಧದ ಯುದ್ಧವು ಕಠಿಣವಾದದ್ದು ಮತ್ತು ಅದಕ್ಕೆ ಇಂತಹ ಕಠಿಣ ನಿರ್ಧಾರಗಳು ಬೇಕಾಗುತ್ತವೆ. ಭಾರತದ ಜನರನ್ನು ಸುರಕ್ಷಿತವಾಗಿಡುವುದು ಸರ್ಕಾರದ ಮುಖ್ಯ ಉದ್ದೇಶ. ಯಾರೂ ಉದ್ದೇಶಪೂರ್ವಕವಾಗಿ ಲಾಕ್‍ಡೌನ್ ಘೋಷಣೆಯನ್ನು ಮುರಿಯಲು ಬಯಸುವುದಿಲ್ಲ ಎಂದು ನಂಬಿಕೆ ಹೊಂದಿದ್ದೇನೆ. ಆದರೆ ಕೆಲವರು ಲಾಕ್‍ಡೌನ್ ನಡುವೆಯೂ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಅಂತವರಿಂದ ಕೊರೊವಾ ವೈರಸ್ ಮತ್ತಷ್ಟು ಹೆಚ್ಚಾಗುತ್ತಿದ್ದು, ನಮ್ಮನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ಕೊರೊನಾ ವೈರಸ್ ವಿರುದ್ಧ ಹೋರಾಡುವ ಅನೇಕ ಸೈನಿಕರು ಇದ್ದಾರೆ. ನಮ್ಮ ಸಹೋದರ, ಸಹೋದರಿಯರಾದ ದಾದಿಯರು, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ನಮಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀವು ಅವರ ಸೇವೆ, ತ್ಯಾಗವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಈ ವೇಳೆ ಮನವಿ ಮಾಡಿಕೊಂಡರು.

ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಆಗ್ರಾದ ಅಶೋಕ್ ಕಪೂರ್ ಅವರು, ತಮ್ಮ ಇಡೀ ಕುಟುಂಬದ ಆರು ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಆದರೆ ಎಲ್ಲರೂ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ನಮಗೆ ಚಿಕಿತ್ಸೆ ನೀಡಿದ ವೈದ್ಯರು, ಅಧಿಕಾರಿಗಳು ಹಾಗೂ ಸರ್ಕಾರಿ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತೇವೆ ಎಂದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಯಾವುದೇ ಲಾಭ ಅಪೇಕ್ಷಿಸದೆ ರೋಗಿಗಳಿಗೆ ಸೇವೆ ಸಲ್ಲಿಸುವವರು ಅತ್ಯುತ್ತಮ ವೈದ್ಯ ಎಂದು ಆಚಾರ್ಯ ಚರಕ್ ಹೇಳಿದ್ದಾರೆ. ಅಂತಹ ಪ್ರತಿಯೊಬ್ಬ ದಾದಿಯರಿಗೆ ನಾನು ಇಂದು ನಮಸ್ಕರಿಸುತ್ತೇನೆ. ನೀವೆಲ್ಲರೂ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಿದ್ದೀರಿ. ವಿಶ್ವವು 2020ಅನ್ನು ನರ್ಸ್, ವೈದ್ಯಕೀಯ ಸಿಬ್ಬಂದಿಯ ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *