ಆರ್‌ಸಿಬಿ ಮಹಿಳಾ ತಂಡಕ್ಕೆ ಸಿದ್ದರಾಮಯ್ಯ, ಡಿಕೆ ಸುರೇಶ್‌, ಬಿಜೆಪಿಯಿಂದ ಪ್ರಸಂಶೆಗಳ ಮಹಾಪೂರ

Public TV
2 Min Read

– ನಮ್ಮ ಬೆಂಗಳೂರಿಗೆ ಮರಳುತ್ತಿದೆ ಆರ್‌ಸಿಬಿ ಸೈನ್ಯ

ಬೆಂಗಳೂರು: ಪ್ರತಿ ಬಾರಿಯೂ ʻಈ ಸಲ ಕಪ್‌ ನಮ್ದೆʼ ಎನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳ ಕನಸು 16 ವರ್ಷಗಳ ಬಳಿಕ ನನಸಾಗಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ (WPL 2024) ಮೊದಲ ಆವೃತ್ತಿಯಲ್ಲಿ ಹೀನಾಯ ಸೋಲನುಭವಿಸಿದ್ದ ಆರ್‌ಸಿಬಿ ಮಹಿಳಾ (RCB Womens) ತಂಡ ತನ್ನ 2ನೇ ಆವೃತ್ತಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 16 ವರ್ಷಗಳ ಬಳಿಕ ಟ್ರೋಫಿ ಗೆದ್ದು ಪ್ರಶಸ್ತಿಯ ಬರ ನೀಗಿಸಿದ ತಂಡಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ರಾಜ್ಯದ ಅನೇಕ ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಟಾಟಾ ಮಹಿಳಾ ಪ್ರೀಮಿಯರ್‌ ಲೀಗ್‌ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರೋಚಕ ಗೆಲುವು ಸಾಧಿಸಿಸುವ ಜೊತೆಗೆ ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಇದು ವಿಶ್ವದಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳಿಗೆ (RCB Fans) ಎಲ್ಲಿಲ್ಲದ ಸಂತಸ ತಂದಿದೆ. ಕಪ್‌ ಗೆದ್ದಿರುವ ಆರ್‌ಸಿಬಿ ಮಹಿಳಾ ತಂಡ ತನ್ನ ಪ್ರಾಮಾಣಿಕ ಅಭಿಮಾನಿಗಳೊಂದಿಗೆ ಸಂಭ್ರಮವನ್ನು ಹಂಚಿಕೊಳ್ಳಲು ತವರಿಗೆ ಆಗಮಿಸುತ್ತಿದೆ. ʻನಾವು ತವರಿಗೆ ಬರುತ್ತಿದ್ದೇವೆ ಎಂದು ಜಗತ್ತಿಗೆ ಸಾರಿ ಹೇಳಿʼ ಎಂದು ಎಕ್ಸ್‌ನಲ್ಲೂ ಬರೆದುಕೊಂಡಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಎಕ್ಸ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಯಾರು ಏನ್‌ ಹೇಳ್ತಾರೆ?
ಸಿದ್ದರಾಮಯ್ಯ: ಟಾಟಾ ಡಬ್ಲ್ಯೂಪಿಎಲ್‌ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಆರ್‌ಸಿಬಿ ತಂಡ ಚಾಂಪಿಯನ್‌ಶಿಪ್ ಅನ್ನು ಮುಡಿಗೇರಿಸಿಕೊಂಡಿದೆ. ಇಡೀ ಪಂದ್ಯಾಕೂಟದುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಆರ್‌ಸಿಬಿ ಅಭಿಮಾನಿಗಳ ದಶಕಗಳ ಕನಸು ಈಡೇರಿದೆ. ಐಪಿಎಲ್ ನಲ್ಲಿಯೂ ನಮ್ಮ ಹುಡುಗರು ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು. ಈ ಸಲ ಕಪ್ ನಮ್ದೆ.

ಬಿಜೆಪಿ ಕರ್ನಾಟಕ: ಅಂತೂ ಇಂತೂ ಈ ಸಲ ಕಪ್ ನಮ್ದೇ!! ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.

ಡಿಕೆ ಸುರೇಶ್‌: ನಮ್ಮ ಹುಡುಗಿಯರು ಇತಿಹಾಸ ನಿರ್ಮಿಸಿದ್ದಾರೆ. ಅಭಿನಂದನೆಗಳು ಆರ್‌ಸಿಬಿ, ಕೊನೆಗೂ ಈ ಸಲ ಕಪ್‌ ನಮ್ದು!. ಅಲ್ಲದೇ ಡಬ್ಲ್ಯೂಪಿಎಲ್‌ ಫೈನಲ್‌ನಲ್ಲಿ ಎದುರಾಳಿ ತಂಡದ ಪ್ರಮುಖ 4 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ ಹೆಮ್ಮೆಯ ಕನ್ನಡತಿ ಶ್ರೇಯಾಂಕಾ ಪಾಟೀಲ್‌ (Shreyanka Patil) ಅವರಿಗೆ ಅಭಿನಂದನೆಗಳು. ಇಂದು ನೀವು ಕನ್ನಡಿಗರ ಹೃದಯವನ್ನು ಗೆದ್ದಿದ್ದೀರಿ!

ಅಭಿಮಾನಿಗಳಿಗೆ ಹಬ್ಬ: ಆರ್‌ಸಿಬಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ರಾತ್ರಿಯಿಡಿ #RCB ಟ್ರೆಂಡ್‌ ಸೃಷ್ಟಿಯಾಗಿತ್ತು. ಅದರಲ್ಲೂ ಬೆಂಗಳೂರಿನ ಹಲವೆಡೆ ಅಭಿಮಾನಿಗಳು ಊರ ಜಾತ್ರೆಯಂತೆ ಪಟಾಕಿ ಸಿಡಿಸಿ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಬೆಂಗಳೂರು ಮಾತ್ರವಲ್ಲ ದೆಹಲಿಯ ಮೆಟ್ರೋದಲ್ಲೂ ಅಭಿಮಾನಿಗಳು ʻಆರ್‌ಸಿಬಿ ಆರ್‌ಸಿಬಿʼ ಘೋಷಣೆ ಮೊಳಗಿಸುತ್ತಿದ್ದರು.

Share This Article