ಚಿನ್ನಸ್ವಾಮಿ ಕಾಲ್ತುಳಿತದಿಂದ ತುಂಬಾ ಡಿಸ್ಟರ್ಬ್ ಆಗಿದ್ದೇನೆ, ನನ್ನ ರಾಜಕೀಯ ಬದುಕಿನಲ್ಲೇ ಬಹಳ ದು:ಖ ಕೊಟ್ಟ ಘಟನೆ – ಸಿಎಂ ಭಾವುಕ

Public TV
4 Min Read

– ಕಾಲ್ತುಳಿತದಲ್ಲಿ ಸರ್ಕಾರದ ತಪ್ಪಿಲ್ಲ, ತಪ್ಪು ಮಾಡಿದವರ ವಿರುದ್ಧ ಕ್ರಮ ವಹಿಸಿದ್ದೇವೆ ಎಂದ ಸಿದ್ದರಾಮಯ್ಯ

ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತದಿಂದ (Chinnaswamy Stampede) ತುಂಬಾ ಡಿಸ್ಟರ್ಬ್ ಆಗಿದ್ದೇನೆ, ನನ್ನ ರಾಜಕೀಯ ಬದುಕಿನಲ್ಲೇ ಬಹಳ ದು:ಖ ಕೊಟ್ಟಂತಹ ಘಟನೆಯಿದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭಾವುಕರಾದರು.

ಮುಂಗಾರು ಅಧಿವೇಶನದ ಕೊನೆಯ ದಿನವಾದ ಶುಕ್ರವಾರ (ಆ.22) ವಿಧಾನಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಪ್ರತಿಧ್ವನಿಸಿತು. ಈ ಬಗ್ಗೆ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸಿ, ಪ್ರಕರಣದಲ್ಲಿ ಸರ್ಕಾರದ ಪಾತ್ರ ಇಲ್ಲ, ಇದಕ್ಕೆ ಸರ್ಕಾರ ಕಾರಣ ಅಲ್ಲ, ಯಾರೂ ರಾಜೀನಾಮೆ ಕೊಡಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು. ಬಿಜೆಪಿಯವರ (BJP) ಸಾರ್ವಜನಿಕ ಕ್ಷಮಾಪಣೆಯ ಆಗ್ರಹ ತಳ್ಳಿಹಾಕಿದ ಸಿಎಂ ಸದನದಲ್ಲಿ ಮತ್ತೊಮ್ಮೆ ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಇದೇ ವೇಳೆ ಆರ್.ಅಶೋಕ್ (R.Ashok) ಮಾತನಾಡಿ, ನಿಮಗೆ ಹೃದಯ, ಮನುಷ್ಯತ್ವ ಇದ್ದಿದ್ರೆ ಕ್ಷಮೆ ಕೇಳಬೇಕಿತ್ತು ಎಂದಿದ್ದಾರೆ.ಇದನ್ನೂ ಓದಿ: ಹೈದ್ರಾಬಾದ್‌ನಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಐವರ ನಿಗೂಢ ಸಾವು

ಸಿಎಂ ಅವರು, ನನಗೆ ಈ ಘಟನೆ ತುಂಬಾ ಡಿಸ್ಟರ್ಬ್ ಮಾಡಿದೆ. ಇಂಥ ದುರಂತ ಆಗಬಾರದಿತ್ತು, ಆಗಿಹೋಗಿದೆ. ನಾನು ಘಟನೆ ನಡೆದ ದಿನವೇ ವಿಷಾದ ವ್ಯಕ್ತಪಡಿಸಿದ್ದೆ. ನನ್ನ ರಾಜಕೀಯ ಜೀವನದಲ್ಲಿ ಇಂಥ ಕಹಿ ಘಟನೆ ಯಾವತ್ತೂ ಆಗಿರಲಿಲ್ಲ. ಕಾಲ್ತುಳಿತದಿಂದ 11 ಜನರ ಸಾವನ್ನು ನಾನು ನೋಡೇ ಇರಲಿಲ್ಲ. ದುರ್ಘಟನೆಗೆ ನಾನು ತುಂಬಾ ದು:ಖಪಟ್ಟಿದ್ದೇನೆ. ವಿಷಾದ ವ್ಯಕ್ತಪಡಿಸಿದ್ದೇನೆ. ಮನುಷ್ಯತ್ವ ಇರೋರಿಗೆ ದು:ಖ ಆಗೇ ಆಗುತ್ತೆ, ನನಗೂ ಆಗಿದೆ ಎಂದು ಭಾವುಕರಾಗಿ ನುಡಿದರು.

ಇನ್ನೂ ನಾವು ಪ್ರಕರಣದಲ್ಲಿ ಕ್ರಮ ತಗೊಂಡಿದ್ದೇವೆ, ಐವರು ಅಧಿಕಾರಿಗಳ ಅಮಾನತು ಮಾಡಿದ್ದೇವೆ. ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅವರನ್ನು ಅರೆಸ್ಟ್ ಮಾಡಿಸಿದ್ದೀವಿ. ಮ್ಯಾಜಿಸ್ಟ್ರಿಯಲ್, ಕುನ್ಹಾ ನೇತೃತ್ವದಲ್ಲಿ ತನಿಖೆ ಮಾಡಿಸಿದ್ದೇವೆ. ಕಾಲ್ತುಳಿತ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ತಗೊಂಡಿದ್ದೀವಿ. ನ್ಯಾಯ ಕೊಡುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಿದ್ದೀವಿ. ನಾವು ಏನೆಲ್ಲ ಕ್ರಮ ತೆಗೊಳ್ಳಬೇಕೋ ಅದೆಲ್ಲವನ್ನು ಮಾಡಿದ್ದೇವೆ. ಹೈಕೋರ್ಟ್‌ನವರು ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಕೋರ್ಟ್ ಹೇಳಿದ ಕೂಡಲೇ ಜಾರ್ಜ್ಶೀಟ್ ಸಲ್ಲಿಕೆ ಮಾಡ್ತೀವಿ ಎಂದು ತಿಳಿಸಿದರು. ಮುಂದುವರೆದು, ಕಾಲ್ತುಳಿತ ಘಟನೆ ನಡೆಯಬಾರದಾಗಿತ್ತು, ನಡೆದುಹೋಗಿದೆ. ಇದಕ್ಕೆ ಸರ್ಕಾರ ಕಾರಣ, ಸಿಎಂ, ಡಿಸಿಎಂ, ಹೋಮ್ ಮಿನಿಸ್ಟರ್ ಕಾರಣ, ರಾಜೀನಾಮೆ ಕೊಡಬೇಕು ಎಂದು ಹೇಳೋದು ಸರಿಯಲ್ಲ. ನಿಮ್ಮ ಅವಧಿಯಲ್ಲಿ ಆದ ಘಟನೆಗಳಿಗೆ ನೀವು ಕ್ಷಮೆ ಕೇಳಿಲ್ಲ, ವಿಷಾದ ವ್ಯಕ್ತಪಡಿಸಲಿಲ್ಲ, ರಾಜೀನಾಮೆ ಕೊಡಲಿಲ್ಲ, ತನಿಖೆಯೂ ಮಾಡಿಸಲಿಲ್ಲ ಅಂತ ಸಿಎಂ ಕೌಂಟರ್ ಕೊಟ್ಟರು.

ಕಾಲ್ತುಳಿತ ಪ್ರಕರಣ ನಡೆದಾಗ ಸಿಎಂ ಜನಾರ್ದನ ಹೊಟೇಲ್‌ಗೆ ಹೋಗಿದ್ದರು ಎಂಬ ಬಿಜೆಪಿ ಆರೋಪಕ್ಕೂ ಪ್ರತಿಕ್ರಿಯೆ ನೀಡಿ, ನಾನು ಜನಾರ್ದನ ಹೊಟೇಲ್‌ಗೆ ಆ ದಿನ 5:30ಕ್ಕೆ ಹೋಗಿದ್ದು ನಿಜ, ನಾನು ಸುಳ್ಳು ಹೇಳಲ್ಲ. ನನ್ನ ಮೊಮ್ಮಗ ಹಿಂದಿನ ದಿನ ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದ. ಗ್ರ‍್ಯಾಂಡ್ ಸ್ಟೆಪ್ಸ್‌ಗೆ ಅವನೂ ಬಂದಿದ್ದ, ದೋಸೆ ತಿನ್ನೋಣ ಅಂದಿದ್ದಕ್ಕೆ ಜನಾರ್ದನ ಹೊಟೇಲ್‌ಗೆ ಹೋಗಿದ್ವಿ. ಆ ದಿನ 5:30ರವರೆಗೂ ನನಗೆ ಕಾಲ್ತುಳಿತ ಸಾವು ಬಗ್ಗೆ ಗೊತ್ತಾಗಿರಲಿಲ್ಲ. ಪೊನ್ನಣ್ಣ ಹೇಳೋವರೆಗೂ ನನಗೆ ಗೊತ್ತಾಗಿರಲಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

ಬಿಜೆಪಿ ಅವಧಿಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ದುರಂತಗಳನ್ನು ಅಂಕಿಅಂಶದೊಂದಿಗೆ ಸಿಎಂ ಉಲ್ಲೇಖಿಸಿದರು. ಕಾಲ್ತುಳಿತ ಪ್ರಕರಣಗಳಲ್ಲಿ ಯಾವ ಸಿಎಂ ಸಹ ರಾಜೀನಾಮೆ ಕೊಟ್ಟಿಲ್ಲ. ಪ್ರಯಾಗ್‌ರಾಜ್ ಕಾಲ್ತುಳಿತಕ್ಕೆ (Prayagraj Stampede) ಯೋಗಿ ಆದಿತ್ಯನಾಥ್ (Yogi Adityanath) ರಾಜೀನಾಮೆ ಕೊಟ್ರಾ? ಅಹಮದಾಬಾದ್ ವಿಮಾನ ದುರಂತಕ್ಕೆ (Ahmedabad Plane Crash) ಗುಜರಾತ್ (Gujarat) ಸಿಎಂ ರಾಜೀನಾಮೆ ಕೊಟ್ರಾ? ಹಾವೇರಿ ಗೋಲಿಬಾರ್‌ಗೆ ಯಡಿಯೂರಪ್ಪ (Yediyurappa) ರಾಜೀನಾಮೆ ಕೊಟ್ರಾ? 2006ರಲ್ಲಿ ಡಾ.ರಾಜ್ ನಿಧನ ವೇಳೆ 7 ಜನ ಸಾವನ್ನಪ್ಪಿದ್ದರು. ಹೆಚ್‌ಡಿಕೆ ಆಗ ಸಿಎಂ, ಬಿಎಸ್‌ವೈ ಡಿಸಿಎಂ. ಆಗ ಕುಮಾರಸ್ವಾಮಿ (HD Kumaraswamy) ರಾಜೀನಾಮೆ ಕೊಟ್ರಾ? ರಾಜೀನಾಮೆ ಕೇಳಿದ್ರಾ? ಗೋಲಿಬಾರ್‌ನಲ್ಲಿ ಸತ್ತ ರೈತರ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ, ಕ್ಷಮೆ ಕೋರಲಿಲ್ಲ, ರಾಜೀನಾಮೆ ಕೊಡಲಿಲ್ಲ. ಸುರೇಶ್ ಕುಮಾರ್ ನಮ್ಮನ್ನೇ ಕುಮ್ಮಕ್ಕು ಕೊಟ್ಟವರು ಅಂದುಬಿಟ್ಟಿದ್ದಾರೆ. ಕೊರೋನಾ ಇದ್ದಾಗ ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ 36 ಜನ ಸಾವನ್ನಪ್ಪಿದ್ದರು. ಆಗ ಸುಧಾಕರ್ ಆರೋಗ್ಯ ಮಂತ್ರಿ, ಬೊಮ್ಮಾಯಿ ಸಿಎಂ. ಆಗ ನೀವು ಅಬೇಟ್ಟರ್ (ಪ್ರೇರಣೆ) ಅಂತ ಸುಧಾಕರ್‌ಗೆ, ಬೊಮ್ಮಾಯಿಗೆ ಕರೆದ್ರಾ? ಇಲ್ಲ. ಈಗ ನನಗೆ ಮಾತ್ರ ಅಬೇಟ್ಟರ್ ಅಂತ ಕರೆಯುತ್ತಿದ್ದೀರಿ. ಕಾಲ್ತುಳಿತ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಇಂಥ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ನಾಯಕರಿಗೆ ಸಿಎಂ ತಿವಿದರು.

ಆರ್‌ಸಿಬಿ ಆಟಗಾರರ ತೆರೆದ ವಾಹನ ಮೂಲಕ ಮೆರವಣಿಗೆ ಸಂಬಂಧ ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದನ್ನೂ ಉಲ್ಲೇಖಿಸಿ ಸಿಎಂ ಟಾಂಗ್ ಕೊಟ್ಟರು. ನಾವು ಸಂಭ್ರಮಕ್ಕೆ ಅವಕಾಶ ಕೊಡದೇ ಇದ್ದಿದ್ರೆ ಬಿಜೆಪಿಯವ್ರು ಅದನ್ನೇ ದೊಡ್ಡದಾಗಿ ಬಿಂಬಿಸಿ ಚಳುವಳಿ ಮಾಡ್ತಿದ್ರು ಎಂದು ಟಕ್ಕರ್ ಕೊಟ್ಟರು. ಜು.3ರಂದೇ ಸಂಭ್ರಮಾಚರಣೆಗೆ ಕೆಎಸ್‌ಸಿಎ ಪತ್ರ ಕೊಡ್ತಾರೆ. ಇನ್ಸ್ಪೆಕ್ಟರ್ ಗಿರೀಶ್ ಪರ್ಮಿಶನ್ ಕೊಡಲಿಲ್ಲ. ಮಧ್ಯಾಹ್ನ 1 ಗಂಟೆಗೆ ಆರ್‌ಸಿಬಿ, ಕೆಎಸ್‌ಸಿಎ ಟ್ವೀಟ್ ಮಾಡ್ತಾರೆ. ಅವರ ಟ್ವೀಟ್‌ನ್ನು ಲಕ್ಷಾಂತರ ಜನ ನೋಡ್ತಾರೆ. ಇಷ್ಟೆಲ್ಲಾ ಇದ್ರೂ ಪೊಲೀಸರು ಕ್ರಮವೇಕೆ ತೆಗೆದುಕೊಳ್ಳಲಿಲ್ಲ. ಟ್ವೀಟ್‌ಗಳನ್ನು ಡೀಲಿಟ್ ಮಾಡಿಸಲಿಲ್ಲ ಎಂದು ದುರಂತಕ್ಕೆ ಸರ್ಕಾರ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಉತ್ತರಕ್ಕೆ ಒಪ್ಪದೇ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಕಾಲ್ತುಳಿತಕ್ಕೆ, 11 ಜನರ ಸಾವಿಗೆ ಸರ್ಕಾರವೇ ಕಾರಣ. ಸಿಎಂ ಇನ್ನೂ ಕ್ಷಮಾಪಣೆ ಕೇಳಿಲ್ಲ. ಸಿಎಂ ಉತ್ತರ ಖಂಡಿಸಿ ಸಭಾತ್ಯಾಗ ಮಾಡ್ತೇವೆ ಎಂದು ಅಶೋಕ್ ಹೇಳಿದರು.

ಒಟ್ಟಿನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಮಣಿಸುವ ವಿಚಾರದಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಸರ್ಕಾರದ ತಪ್ಪು ಯಾವತ್ತೂ ಒಪ್ಪಿಕೊಳ್ಳುವಂತೆ ಕಾಣದ ಸಿಎಂ ಬಿಜೆಪಿಯನ್ನೇ ತಮ್ಮ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾದರು.ಇದನ್ನೂ ಓದಿ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ದಸರಾ ಉದ್ಘಾಟನೆ: ಸಿಎಂ ಘೋಷಣೆ

Share This Article