‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

Public TV
1 Min Read

ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕುರಿತಾಗಿ ಮತ್ತೊಂದು ಸಿನಿಮಾ (Movie) ಘೋಷಣೆಯಾಗಿದೆ. ಸಿದ್ಧರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ (Chief Minister) ಆಯ್ಕೆಯಾಗುತ್ತಿದ್ದಂತೆಯೇ  ‘ಸಿದ್ದರಾಮಯ್ಯ ಎಂಬ ನಾನು’ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ ನಿರ್ದೇಶಕ ನಾಗರಾಜು ಬಿ. ಈಗಾಗಲೇ ತಮ್ಮ ಸಿನಿಮಾದ ಪೋಸ್ಟರ್ ಅನ್ನು ಕೂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯನವರ ಜೀವನವನ್ನು (Biopic) ಆಧರಿಸಿ ಚಿತ್ರ ಮಾಡುವುದಾಗಿ ಸತ್ಯರತ್ನಂ ಎನ್ನುವವರು ಹೇಳಿಕೊಂಡಿದ್ದರು. ಈ ಸಿನಿಮಾದಲ್ಲಿ ‘ಲೀಡರ್ ರಾಮಯ್ಯ’ ಎಂದು ಹೆಸರಿಟ್ಟಿದ್ದರು. ರಾಮನವಮಿಯ ದಿನದಂದು ಸಿನಿಮಾದ ಪೋಸ್ಟರ್ ಅನ್ನು ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸದಲ್ಲೇ ಬಿಡುಗಡೆ ಮಾಡಲಾಗಿತ್ತು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ತಯಾರಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದನ್ನೂ ಓದಿ:Exclusive- ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಹೇಗೆ?

ಪೋಸ್ಟರ್ ರಿಲೀಸ್ ಆಗಿ ಹಲವು ದಿನಗಳು ಕಳೆದರೂ, ಈವರೆಗೂ ಆ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸಿದ್ದರಾಮಯ್ಯನವರ ಪಾತ್ರವನ್ನು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಅದು ಕೂಡ ಈವರೆಗೂ ಅಧಿಕೃತವಾಗಿಲ್ಲ. ಚುನಾವಣೆ, ನೀತಿಸಂಹಿತೆ ಕಾರಣದಿಂದಾಗಿ ಸಿನಿಮಾ ಶುರು ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಈ ಸಿನಿಮಾದ ಜೊತೆಗೆ ಮತ್ತೊಂದು ಸಿನಿಮಾ ಘೋಷಣೆಯಾಗಿದೆ.

ಸಿದ್ದರಾಮಯ್ಯ ಎಂಬ ನಾನು ಚಿತ್ರತಂಡ ಹೇಳಿಕೊಂಡಂತೆ ಸದ್ಯದಲ್ಲೇ ಚಿತ್ರೀಕರಣ ಕೂಡ ಆರಂಭ ಮಾಡಲಿದ್ದಾರಂತೆ. ಆದರೆ ಈ ಕುರಿತು ಸಿದ್ಧರಾಮಯ್ಯ ಅವರ ಜೊತೆ ಮಾತುಕತೆ ಮಾಡಿದ್ದರೋ ಅಥವಾ ಅವರಿಗೆ ಗೊತ್ತಾಗದಂತೆ ಸಿನಿಮಾ ಮಾಡುತ್ತಿದ್ದರೋ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ.

Share This Article