ನಾಳೆಯೇ ರಾಜೀನಾಮೆ ಕೊಡಲು ನಾನು ರೆಡಿ: ರಮೇಶ್ ಜಾರಕಿಹೊಳಿ

Public TV
2 Min Read

ಬೆಂಗಳೂರು: ಸಹೋದರ ಸತೀಶ್ ಜಾರಕಿಹೊಳಿ ಸಚಿವ ಸ್ಥಾನ ಕೇಳಿದರೆ ನಾಳೆಯೇ ನಾನು ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಪಕ್ಷ ಬಿಡುತ್ತೇನೆ ಎಂಬುವುದು ಸುಳ್ಳು. ನನಗೆ ನೋವಾಗಿರುವುದು ಸತ್ಯ. ಆದರೆ ಪಕ್ಷ ಬಿಡುವುದಿಲ್ಲ. ನಮ್ಮ ನಾಯಕರಾದ ಸಿದ್ದರಾಮಯ್ಯ ವಿದೇಶಿ ಪ್ರವಾಸದಿಂದ ಬಂದ ಬಳಿಕ ಕೂತು ಮಾತನಾಡುತ್ತೇವೆ ಎಂದರು.

ಇದೇ ವೇಳೆ ಸತೀಶ್ ಜಾರಕಿಹೋಳಿ ಸಿಎಂ ಸ್ಥಾನಕ್ಕೆ ಅರ್ಹರು ಎಂದು ಹೇಳಿದ ರಮೇಶ್, ಅವರು ಮುಂದೆ ಮುಖ್ಯಮಂತ್ರಿಯಾಗಬೇಕು. ಆದರೆ ಆ ಸ್ಥಾನಕ್ಕೆ ನಾನು ಅರ್ಹನಲ್ಲ. ಒಂದೊಮ್ಮೆ ಸಹೋದರ ಸತೀಶ್ ಜಾರಕಿಹೊಳಿ ಸಚಿವ ಸ್ಥಾನ ಕೇಳಿದರೆ ನಾಳೆಯೇ ರಾಜಿನಾಮೆ ನೀಡಿ ಬಿಟ್ಟುಕೊಡುತ್ತೇನೆ ಎಂದು ತಿಳಿಸಿದರು.

ಸಚಿವ ಡಿಕೆಶಿಗೆ ನೇರ ಟಾಂಗ್: ಈ ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಬೆಳಗಾವಿ ಜಿಲ್ಲಾ ರಾಜಕಾರಣ ವಿಷಯದಲ್ಲಿ ಡಿಕೆ ಶಿವಕುಮಾರ್ ಎಂಟ್ರಿ ಆದರೆ ನಾವು ಸುಮ್ಮನಿರಲ್ಲ. ಅವರು ದೊಡ್ಡ ನಾಯಕರು ಅಗತ್ಯವಿದ್ದರೆ ನಾವೇ ಸ್ವತಃ ಫೋನ್ ಮಾಡಿ ಕರೆಯುತ್ತೇವೆ. ಆಗ ಬರುವುದಾದರೆ ಬರಲಿ. ಅದನ್ನು ಬಿಟ್ಟು ಅವರೇ ಬರಬಾರದು. ಮೊನ್ನೆ ಜಿಲ್ಲೆಯಲ್ಲಿ ನಡೆದ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಎರಡು ಕಡೆಯಿಂದ ತಪ್ಪು ಆಗಿದೆ. ಅದನ್ನು ಸರಿಪಡಿಸಿಕೊಂಡಿದ್ದೇವೆ ಎಂದರು.

ಬೆಳಗಾವಿ ಟಿಕೆಟ್: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಎಂಎಲ್‍ಸಿ ವಿವೇಕ್ ರಾವ್ ಪಾಟೀಲ್, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಮೂವರಲ್ಲಿ ಯಾರಿಗೆ ಕೊಟ್ಟರು ಸ್ವೀಕರಿಸುತ್ತೇವೆ. ಈಗಾಗಲೇ ಈ ವಿಚಾರವನ್ನು ನಮ್ಮ ಹೈಕಮಾಂಡ್ ಗಮನಕ್ಕೂ ತಂದಿದ್ದೇವೆ ಎಂದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಸಚಿವರೊಬ್ಬರನ್ನು ಭೇಟಿ ಆಗಿದ್ದೇವೆ. ಅಲ್ಲಿ ನಮ್ಮ ಸಕ್ಕರೆ ಕಾರ್ಖಾನೆ ಇದೆ. ಹಾಗಾಗಿ ಅಲ್ಲಿಗೆ ಭೇಟಿ ನೀಡಿದ್ದ ವೇಳೆ ಬಿಜೆಪಿ ಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ಇದರಲ್ಲಿ ತಪ್ಪೇನಿದೆ. ಆದರೆ ರಾಜ್ಯದ ಯಾವುದೇ ಬಿಜೆಪಿ ಮುಖಂಡರು ನನಗೆ ಸಂಪರ್ಕವಿಲ್ಲ. ಯಾರೂ ನಮ್ಮನ್ನ ಸಂಪರ್ಕಿಸಿಲ್ಲ. ಆದರೆ ಎರಡು ದಿನಗಳ ಹಿಂದೆಯಷ್ಟೇ ರೇಣುಕಾಚಾರ್ಯ ಅವರು ಮನೆಗೆ ಭೇಟಿ ನೀಡಿ ಮಾತನಾಡಿದ್ದರು. ಅಲ್ಲದೇ ಕ್ಷೇತ್ರದ ಕೆಲಸಕ್ಕಾಗಿ ಶ್ರೀರಾಮುಲು ಎರಡು ಬಾರಿ ನಮ್ಮ ಮನೆಗೆ ಬಂದಿದ್ದರು. ಹಾಗಂತ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ ಎಂದು ಹೇಳಲು ಸಾಧ್ಯವೇ? ರಾಜ್ಯ ಸರ್ಕಾರ ಐದು ವರ್ಷ ತನ್ನ ಆಡಳಿವನ್ನು ಪೂರ್ಣಗೊಳಿಸಲಿದ್ದು, ನಮ್ಮಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *